ಕಲಬುರಗಿ | ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಲವು ಸಂಘಟನೆಗಳಿಂದ ಪ್ರತಿಭಟನೆ

ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರದಂದು ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಸಾಮೂಹಿಕ ಮುಷ್ಕರದಲ್ಲಿ ಪಾಲ್ಗೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ನಡಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನೆಲೆ ಈ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂಗೊಳಿಸುವವರೆಗೂ ಕನಿಷ್ಠ ವೇತನ ನೀಡಬೇಕು, ದೇಶದ ಕಾರ್ಪೊರೇಟ್ ಬಂಡವಾಳದಾರರಿಗೆ 18.32 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ದೇಶದ ಭವಿಷ್ಯತ್ತನ್ನು ರೂಪಿಸಲು ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ. ಇಂತಹ ಧೋರಣೆಗಳ ವಿರುದ್ಧ ಅಂಗನವಾಡಿ ನೌಕರರು ಸಂಘ ಕಟ್ಟಿ, ಮುಷ್ಕರಗಳ ಮುಖಾಂತರ ಹೋರಾಟಗಳನ್ನು ನಡೆಸುತ್ತಿದ್ದರು. ಆದರೆ ಈಗ ದೇಶದ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡುವ ಮೂಲಕ ಸಂಘ ಕಟ್ಟುವ ಹಕ್ಕು ಮತ್ತು ಮುಷ್ಕರದ ಹಕ್ಕುಗಳಿಗೆ ಹಲವು ರೀತಿಯ ನಿರ್ಬಂಧಗಳನ್ನು ತರುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದೆ ಎಂದು ಪ್ರತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದುಗೊಳಿಸಬೇಕು. ಐಸಿಡಿಎಸ್ ಯೋಜನೆಗೆ ಬಜೆಟ್ ಅನ್ನು ಹೆಚ್ಚಿಸಬೇಕು. 26 ಸಾವಿರ ರೂ. ಕನಿಷ್ಠ ವೇತನ, 10 ಸಾವಿರ ರೂ. ಮಾಸಿಕ ಪಿಂಚಣಿ ಕೊಡಬೇಕು. ಕೇಂದ್ರ ಸರ್ಕಾರದ ನಿಲುವು 2013ರ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿರುವುದರಿಂದ ಪೋಷಣ್ ಟ್ರ್ಯಾಕರ್ ಕಡ್ಡಾಯ ಮಾಡಬಾರದು. ರಾಜ್ಯದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾರಂಭ ಮಾಡಬೇಕು ಆಗ್ರಹಿಸಿದರು.
ಅಲ್ಲದೇ ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ಹಾಗೂ ಘೋಷಿತ 19 ಸೇವೆಗಳನ್ನು ನೀಡಬೇಕು. ನೊಂದಾಯಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಜಾರಿಗೊಳಿಸಬೇಕು.ನಕಲಿ ಕಟ್ಟಡ ಕಾರ್ಮಿಕರ ಕಾರ್ಡಗಳನ್ನು ತನಿಖೆ ಮಾಡಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘ, ಸಿಪಿಐ ಪಕ್ಷ, ಸಿಪಿಐ (ಎಂ) ಪಕ್ಷ, ಜನವಾದಿ ಮಹಿಳಾ ಸಂಘಟನೆ,ಸೆಂಟರ್ ಆಫ್ ಇಂಡಿಯಾ ಟ್ರೆಡ್ ಯುನಿಯನ್ CITU, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೈನ್ಯ, ದಲಿತ ಸಂಘಟನೆ ಸಮಿತಿ ಅಂಬೇಡ್ಕರ್ ವಾದಿ, ಮಾವಳಿ ಶಂಕರ ಬಣ DSS ಕಲಬುರಗಿ, ಗ್ರಾಮ ಪಂಚಾಯತಿ ನೌಕರರ ಸಂಘ, ವೆಲ್ ಫರ್ ಪಾರ್ಟಿ ಆಫ್ ಇಂಡಿಯಾ, ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಮೆಡಿಕಲ್ ರಿಪ್ರೆಜಿಂಟ್ ಯುನಿಯನ್ FMRI ಸಂಘ, ಸಂಯುಕ್ತ ಕರ್ನಾಟಕ ಕಲಬುರಗಿ, ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಗೌರಮ್ಮ, ಭೀಮಾಶಂಕರ ಮಾಡಿಯಾಳ, ಪ್ರಭುದೇವ್ ಯಳಸಂಗಿ, ಕೆ.ನೀಲಾ, ಮೀನಾಕ್ಷಿ ಬಾಳಿ, ಮಹೇಶ್ ಎಸ್.ಬಿ., ಪದ್ಮಿನಿ ಕಿರಣಗಿ, ಶರಣಬಸಪ್ಪ ಮಮಶೆಟ್ಟಿ, ಡಾ.ಮಹೇಶ್ ಕುಮಾರ್ ರಾಥೋಡ್, ಹಣಮಂತರಾಯ್ ಅಟ್ಟೂರು, ಎಸ್.ಎಂ ಶರ್ಮಾ, ಮೌಲಾ ಮುಲ್ಲಾ, ಶಂಕರ ಕಟ್ಟಿ ಸಂಗಾವಿ, ಅಶೋಕ್ ಗೂಳಿ, ಮೊಹಸೀನ್ ಪಟೇಲ್, ಮಲ್ಲಿಕಾರ್ಜುನ್ ಮಾಳಗೆ, ಎಸ್.ಆರ್.ಕೊಲ್ಲೂರು, ಮೇಘರಾಜ ಕಠಾರೆ, ಶಾಂತಾ, ಜಾವೀದ್ ಹುಸೇನ್, ಸುಜಾತಾ ವೈ., ಅರ್ಜುನ್ ಗೊಬ್ಬೂರು ಸೇರಿದಂತೆ ಹಲವರು ಭಾಗವಹಿಸಿದ್ದರು.







