ಕಲಬುರಗಿ | ತೊಗರಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ತೊಗರಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಶನಿವಾರ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ತೊಗರಿ ಚೆಲ್ಲುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಬೆಳೆಯಾಗಿರುವ ತೊಗರಿ ಈ ಸಲ ಬಹಳಷ್ಟು ನಷ್ಟವಾಗಿದೆ, ಕೂಡಲೆ ಪ್ರತ್ಯೇಕ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಒಂದು ವೇಳೆ ಘೋಷಣೆ ಮಾಡದಿದ್ದಲ್ಲಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಜ.22ರಂದು ಕಲಬುರಗಿ ಬಂದ್ ಗೆ ಕರೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಬಿತ್ತನೆ ಮಾಡಿದ 6.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ, ಒಣಗಿದ ತೊಗರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಮೌಲಾ ಮುಲ್ಲಾ ಮಾತನಾಡಿ, ಒಣಗಿದ ತೊಗರಿಗೆ ಬೆಳೆ ವಿಮೆ ಮಾಡಬೇಕು, ಪ್ರತಿ ಕ್ವಿಂಟಾಲ್ ತೊಗರಿಗೆ 12,550 ರೂ. ಬೆಂಬಲ ಬೆಲೆ, ಸಿಎಂ ಆವರ್ಥ ನಿಧಿಯಿಂದ 500 ರೂ. ಪ್ರೋತ್ಸಾಹಧನ ನೀಡಬೇಕು, ಸಂಕಷ್ಟದಲ್ಲಿರುವ ರೈತರ ಪರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ನಿಲ್ಲಬೇಕು, ಸುಳ್ಳುಗಳನ್ನು ಹೇಳುವುದನ್ನು ಬಿಟ್ಟು ರೈತರ ಸಮಸ್ಯೆಗಳನ್ನು ಈಡೇರಿಸಿ ಎಂದು ಸರಕಾರಕ್ಕೆ ಎಚ್ಚರಿಸಿದರು.
ಭೀಮಾಶಂಕರ್ ಮಾಡಿಯಾಳ ಮಾತನಾಡಿ, ತೊಗರಿ ಮಂಡಳಿಗೆ ಪ್ರತ್ಯೇಕ 25 ಕೋಟಿ ರೂ. ಮೀಸಲಿಡಬೇಕು, ಕಾಫಿ ಮಂಡಳಿಗೆ ತೋರುತ್ತಿರುವ ಕಾಳಜಿಯನ್ನು ತೊಗರಿ ಮಂಡಳಿಗೂ ಮುತುವರ್ಜಿ ವಹಿಸಬೇಕು ಎಂದರು.
ರೈತರು ಬೆಳೆದಿರುವ ಇತರ ಬೆಳೆಗಳಿಗೆ ಎಂಎಸ್ಪಿ ನಿರ್ಣಯಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕಲಬುರಗಿ ಬಂದ್ ಗೆ ಕರೆ ನೀಡಿದ್ದೇವೆ, ಅಲ್ಲಿಯವರೆಗೆ ನೀವು ಬೇಡಿಕೆ ಈಡೇರಿಸುವುದಾಗಿ ಹೇಳಿದರೆ, ಬಂದ್ ಕರೆಯನ್ನು ಹಿಂಪಡೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ್ ಇಂಗಿನ್, ಎಸ್.ಆರ್.ಕಲ್ಲೂರ್, ಅರ್ಜುನ್ ಗೊಬ್ಬೂರ್, ಭೀಮಾಶಂಕರ ಮಾಡಿಯಾಳ, ಎಂ.ಬಿ ಸಜ್ಜನ್, ದಿಲೀಪ್ ನಾಗೋರೆ, ಬಾಬು ಹೂವಿನಹಳ್ಳಿ, ಮಹಾಂತೇಶ್ ಜಮಾದಾರ್, ನಾಗಯ್ಯ ಸ್ವಾಮಿ, ಮೇಘರಾಜ ಕಠಾರೆ ಸೇರಿದಂತೆ ಇತರರು ಇದ್ದರು.







