Kalaburagi | ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 11 ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
ಸೆ.16ರಂದು ಮುಖ್ಯಮಂತ್ರಿ ಸ್ಪಷ್ಟ ಭರವಸೆ ನೀಡದಿದ್ದರೆ ಘೇರಾವ್ ಎಚ್ಚರಿಕೆ : ಮುತ್ತಣ್ಣ ನಡಗೇರಿ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಆಗಮಿಸಲಿರುವ ಮುಖ್ಯಮಂತ್ರಿ ಹಾಗೂ ಸಚಿವರು ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ 11 ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಕುರಿತು ಸೆಪ್ಟೆಂಬರ್ 16ರಂದು ಜನರ ಎದುರು ಸ್ಪಷ್ಟ ಭರವಸೆ ನೀಡಬೇಕು ಎಂದು ಆಗ್ರಹಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ರಾಜ್ಯ ಸರ್ಕಾರದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಆರೋಗ್ಯ ಕ್ಷೇತ್ರವನ್ನು ಹೊರತುಪಡಿಸಿ ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ, ವಲಸೆ ನಿಯಂತ್ರಣ ಹಾಗೂ ಬಡತನ ನಿರ್ಮೂಲನೆಗೆ ಪೂರಕವಾದ ಯಾವುದೇ ದೊಡ್ಡ ಯೋಜನೆಗಳು ಜಾರಿಯಾಗಿಲ್ಲ ಎಂದು ಆರೋಪಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಆರು ಆಣೆಕಟ್ಟುಗಳಿದ್ದರೂ ಅವುಗಳ ನೀರನ್ನು ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು ಕಳೆದ ಮೂರು ವರ್ಷಗಳಿಂದ ಕಡತ ಮತ್ತು ನಕ್ಷೆಗಳ ಹಂತದಲ್ಲೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿಯಲ್ಲಿ ಕಲಬುರಗಿಯಲ್ಲಿ ಕಲ್ಯಾಣ ಸೌಧ ನಿರ್ಮಿಸಿ ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು, ಬೀದರ್–ಲಿಂಗಸುಗೂರು–ಬಳ್ಳಾರಿ ನಾಲ್ಕು ಪಥದ ಹೆದ್ದಾರಿಗೆ ಅನುದಾನ ಬಿಡುಗಡೆ ಮಾಡಬೇಕು, ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಅದೇ ರೀತಿ ಸ್ಮಾರ್ಟ್ ಸಿಟಿಗೆ ಘೋಷಿಸಿರುವ ₹1,685 ಕೋಟಿ ಅನುದಾನ ಬಿಡುಗಡೆ ಮಾಡಬೇಕು, 100 ಎಕರೆ ಪ್ರದೇಶದಲ್ಲಿ ಐಟಿ–ಬಿಟಿ ಮತ್ತು ಸ್ಟಾರ್ಟ್‌ಅಪ್ ಪಾರ್ಕ್ ಸ್ಥಾಪಿಸಬೇಕು, ಐದು ವಿಶ್ವವಿದ್ಯಾಲಯಗಳ ಪ್ರಾದೇಶಿಕ ಕೇಂದ್ರಗಳು, ಜಿಸಿಸಿ, ಎಸ್‌ಟಿಪಿಐ, ಸೈನ್ಸ್ ಸಿಟಿ ಸ್ಥಾಪಿಸುವುದರ ಜೊತೆಗೆ ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್ ಕಂಪನಿಗಳ ಶಾಖೆಗಳನ್ನು ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಇದರೊಂದಿಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ ಆಯೋಜನೆ, ಪ್ರತ್ಯೇಕ ಕೈಗಾರಿಕಾ ನೀತಿ ಜಾರಿ, ಕಲಬುರಗಿ ಎರಡನೇ ವರ್ತುಲ ರಸ್ತೆಗೆ ಅನುದಾನ ಮಂಜೂರು ಹಾಗೂ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯವನ್ನು ಕಲಬುರಗಿಯಲ್ಲೇ ಆರಂಭಿಸಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ ಮತ್ತು ಡಾ. ಅಜಯ್ ಸಿಂಗ್ ಅವರು ಸೆಪ್ಟೆಂಬರ್ 16ರಂದು ಈ ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿಗೆ ಘೇರಾವ್ ಹಾಕಿ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಮುತ್ತಣ್ಣ ನಡಗೇರಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಣಮಂತ ಇಟಗಿ, ಜೈಭೀಮ ಮಾಳಗೆ, ಮೋಹನ ಸಾಗರ, ಅರುಣ ತಾವಡೆ, ದೇವು ದೊರೆ, ಮಲ್ಲು ದೊರೆ, ರಾಹುಲ ಶೃಂಗೇರಿ, ಪುಟ್ಟು ಶಿರಸಗಿ, ಆಕಾಶ ಭೀಮಳ್ಳಿ, ಶ್ರೀಶೈಲ ಪೂಜಾರಿ ಸೇರಿದಂತೆ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






