Kalaburagi | ಆರೆಸ್ಸೆಸ್ ಕಡ್ಡಾಯ ನೋಂದಣಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಹಾಗೂ ಎಲ್ಲಾ ಸಂಘಟನೆಗಳಿಗೆ ಒಂದೇ ರೀತಿಯ ಕಾನೂನು ನಿಯಮಗಳು ಅನ್ವಯವಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ ಅವರ ನೇತೃತ್ವದಲ್ಲಿ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಲಚ್ಚಪ್ಪ ಎಸ್. ಜಮಾದಾರ, ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸುವ ಎಲ್ಲಾ ಸಂಘ-ಸಂಸ್ಥೆಗಳು, ಟ್ರಸ್ಟ್‌ಗಳು ಹಾಗೂ ಸರ್ಕಾರೇತರ ಸಂಸ್ಥೆಗಳಂತೆ ಆರೆಸ್ಸೆಸ್ ಕೂಡ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ತನ್ನ ಹಣಕಾಸು ವ್ಯವಹಾರಗಳ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ದೇಶದ ಎಲ್ಲಾ ಸಂಘಟನೆಗಳಿಗೆ ಒಂದೇ ರೀತಿಯ ನೋಂದಣಿ, ಲೆಕ್ಕಪರಿಶೋಧನೆ ಹಾಗೂ ಹಣಕಾಸು ಮಾಹಿತಿ ಬಹಿರಂಗಪಡಿಸುವ ನಿಯಮಗಳನ್ನು ಸಮಾನವಾಗಿ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್‌ನ ನೋಂದಣಿ ಕುರಿತು ಎತ್ತಿರುವ ಪ್ರಶ್ನೆ ನ್ಯಾಯಸಮ್ಮತವಾಗಿದೆ ಎಂದು ಹೇಳಿದ ಅವರು, ಸಚಿವರಿಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಭದ್ರತೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿಯಲ್ಲಿ ಆರೆಸ್ಸೆಸ್‌ನ ಕಡ್ಡಾಯ ನೋಂದಣಿ, ನೋಂದಣಿಯಿಲ್ಲದೆ ಸಂಘಟನೆ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳುವುದು ಹಾಗೂ ಹಣಕಾಸು ಪಾರದರ್ಶಕತೆ ಕುರಿತ ನಿಯಮಗಳನ್ನು ಎಲ್ಲ ಸಂಘಟನೆಗಳಿಗೂ ಸಮಾನವಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಭೀಮಶಾ ಖನ್ನಾ, ರಾಮಲಿಂಗ ಬಾನರೋ, ಹಣಮಂತ ಸಂಕನೂರ್, ಬಸವರಾಜ ಚಿನಮಳ್ಳಿ, ಮಲ್ಲಿಕಾರ್ಜುನ ಗುಡ್ಡಾ, ಪರಮೇಶ್ವರ ಅಷ್ಟಂದ, ಸತೀಶ ಜಮಾದಾರ, ಉಮೇಶ ಕುರಿಕೋಟ, ಅಭಿಷೇಕ್ ಉಪಾಧ್ಯಾಯ, ಮತೀನ್ ಪಟೇಲ್, ವಿಜಯ, ಮಡಿವಾಳಪ್ಪ ಕಟ್ಟಿಮನಿ, ಅರುಣಕುಮಾರ ಇನಾಮದಾರ್, ರಾಮು ಉಮ್ಮರಗಿ, ರಾಣು ಮುದ್ದಣಕರ್, ಅಂಬಾರಾಯ ಜವಳಗಾ, ರಾಮ ರಾಠೋಡ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






