ಕಲಬುರಗಿ | ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಗತ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಗೌರವಾಧ್ಯಕ್ಷೆ ಕೆ. ನೀಲಾ, 2017-18ನೇ ಸಾಲಿನಲ್ಲೇ ಗುತ್ತಿಗೆ ಪದ್ಧತಿ ರದ್ದುಗೊಳಿಸುವ ಆದೇಶ ಹೊರಡಿಸಲಾಗಿದ್ದರೂ, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಇನ್ನೂ ಗುತ್ತಿಗೆ ಪದ್ಧತಿ ಮುಂದುವರಿದಿರುವುದು ಏಕೆ ಎಂದು ಪ್ರಶ್ನಿಸಿದರು.
ಪೌರಕಾರ್ಮಿಕರ ಬೇಡಿಕೆಗಳ ಕುರಿತು ಈ ಹಿಂದೆ ಜಿಲ್ಲಾಧಿಕಾರಿಗಳು ಕೆಲಸ ಖಾಯಂಗೊಳಿಸುವುದು ಹಾಗೂ ಗುತ್ತಿಗೆ ಪದ್ಧತಿ ರದ್ದುಪಡಿಸುವ ಭರವಸೆ ನೀಡಿದ್ದರು. ಆದರೆ ಆ ಆದೇಶವನ್ನು ಬಳಿಕ ಹಿಂಪಡೆಯಲಾಗಿದೆ ಎಂದು ಆರೋಪಿಸಿದ ಅವರು, ಕಾರ್ಮಿಕರನ್ನು ನೇರ ಪಾವತಿ ವ್ಯವಸ್ಥೆಗೆ ತರಬೇಕಾಗಿದ್ದರೂ ಗುತ್ತಿಗೆ ಪದ್ಧತಿಯನ್ನು ಮುಂದುವರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇ 1ರಂದು ಕಾರ್ಮಿಕ ದಿನಾಚರಣೆ ಇದ್ದರೂ ಅದೇ ದಿನ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಎಂಟು ಗಂಟೆಗಳ ಕೆಲಸದ ಅವಧಿಯನ್ನು ಮೀರಿ ದುಡಿಸಿಕೊಳ್ಳಲಾಗುತ್ತಿದ್ದು, ಇದು ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.
ತಿಂಗಳುಗಳ ಕಾಲ ಹೋರಾಟ ನಡೆಸುತ್ತಿದ್ದರೂ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಮನವಿ ಸ್ವೀಕರಿಸಿದ ಪಾಲಿಕೆ ಅಧಿಕಾರಿಗಳು, ನೇರ ಪಾವತಿ ವ್ಯವಸ್ಥೆಯಲ್ಲಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಚಾಲಕರು, ಕ್ಲೀನರ್‌ಗಳು ಹಾಗೂ ಸ್ವೀಪರ್‌ಗಳನ್ನು ನೇರ ಪಾವತಿ ವ್ಯವಸ್ಥೆಗೆ ತರಲು ಒಂದು ವಾರದೊಳಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಶರಣು ಅತನೂರ, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕಾ.ಎಂ.ಬಿ.ಸಜ್ಜನ್, ಉಪಾಧ್ಯಕ್ಷರಾದ ನಾಗಪ್ಪ ರಾಯಚೂರಕರ, ದಲಿತ ಹಕ್ಕುಗಳ ಸಮಿತಿಯ ಅದ್ಯಕ್ಷರಾದ ಸುಧಾಮ ಧನ್ನಿ, ಕಾರ್ಯದರ್ಶಿ ಪಾಂಡುರಂಗ ಮಾವಿನಕರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮಂತ ಬಿರಾದಾರ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮೀನಾಕ್ಷಿ ಬಾಳಿ, ಡಿವೈಎಫ್ಐನ ರಾಜ್ಯ ಅಧ್ಯಕ್ಷರಾದ ಲವಿತ್ರ, ಎಸ್ಎಫ್ಐನ ಮುಖಂಡರಾದ ಇಮಾಮಸಾಬ ನದಾಫ್, ಪ್ರದೀಪ, ತಾಯಣ್ಣ, ಲೋಹಿತ, ಕವಿತ, ಕಮಲಾಬಾಯಿ, ವೈಶಾಲಿ, ಮರೆಪ್ಪ ಹಲವರು ಇದ್ದರು.






