ಕಲಬುರಗಿ| VB–G RAM G ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: VB–G RAM G ಮಸೂದೆ ವಾಪಸ್ಸಿಗೆ ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷ (ಎಂ) ಜಿಲ್ಲಾ ಸಮಿತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಕೇಂದ್ರದ ಹೊಸ ಮಸೂದೆಯಿಂದ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ಹೊಸ ಮಸೂದೆಯನ್ನು ಕೇಂದ್ರದ ನಿಯಂತ್ರಣವನ್ನು ವಿಸ್ತರಿಸುವ ಮತ್ತು ರಾಜ್ಯಗಳಿಗೆ ಆರ್ಥಿಕ ಹೊರೆಯನ್ನು ವರ್ಗಾಯಿಸುವ ಪ್ರಯತ್ನ ನಡೆದಿದೆ. ಮಸೂದೆಯು ಅಧಿಕಾರವನ್ನು ಕೇಂದ್ರೀಕರಿಸುತ್ತದೆ. ಇದು ಪ್ರತಿ ವರ್ಷ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ವೇತನ ಉದ್ಯೋಗದ ಕಾನೂನು ಖಾತರಿಯನ್ನು ಒದಗಿಸುತ್ತದೆ. ಆದರೆ, ಈಗ ಯೋಜನೆಯ ವೆಚ್ಚದ ಶೇ.40 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿದೆ. ಹೀಗಾಗಿ ಇದು ಆರ್ಥಿಕ ಹೊರೆಯನ್ನು ರಾಜ್ಯಗಳಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಡಾ.ಮೀನಾಕ್ಷಿ ಬಾಳಿ, ಮೇಘರಾಜ ಕಠಾರೆ, ಸಲ್ಮಾನ್ ನಗರ, ಪ್ರಮೋದ್ ಪಾಂಚಾಳ, ಶಾಂತಾ ಘಂಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.





