ಕಲಬುರಗಿ | ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ದೇಶದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಂಘಟನೆ ಮತ್ತು ಕುಲ್ ಜಮಾತಿ ಇತ್ತೆಹಾದ್ ಇ- ಮಿಲ್ಲತ್ ಸಂಘಟನೆಯ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರಕಾರ, ಪ್ರಧಾನಿ ಮೋದಿ ಅವರ ವಿರುದ್ದ ಘೋಷಣೆ ಕೂಗಿ, ತಿದ್ದುಪಡಿ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿದ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಪ್ರತಿಭಟನಕಾರರು, ವಕ್ಫ್ ತಿದ್ದುಪಡಿ ಕಾಯ್ದೆಯು 25, 26 ಮತ್ತು 29ರ ಸಂವಿಧಾನದ ಹಕ್ಕನ್ನು ಉಲ್ಲಂಘಿಸುತ್ತದೆ. ಈ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೆ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ಅಲ್ಲದೆ, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರನ್ನು ಆಯ್ಕೆ ಮಾಡುವುದರ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವಾಗುತ್ತಿದೆ. ಹಾಗಾಗಿ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆ ಮಸೂದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ದೇಶದ್ಯಾಂತ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಸ್ಗರ್ ಚುಲ್ಬುಲ್, ಮೌಲಾನಾ ಶರೀಫ್ ಮಜ್ಹರಿ, ಝಾಕೀರ್ ಹುಸೇನ್, ಮುಬೀನ್ ಅಹ್ಮದ್, ರಿಝ್ವಾನ್ ಸಿದ್ದಿಕಿ, ಶಹ್ನಾಝ್ ಅಕ್ತರ್, ಅಡ್ವೋಕೇಟ್ ಜಬ್ಬಾರ್ ಗೋಲಾ, ಮೌಲಾನಾ ನೂಹ್, ಲಕ್ಮಿಕಾಂತ್ ಹುಬ್ಬಳ್ಳಿ, ಪ್ರೊ.ಸಂಜಯ್ ಮಾಕಲ್, ರಯೀಸ್ ಫಾತೀಮಾ, ರಶೀದ್, ಮೌಲಾನಾ ಶಫೀಕ್ ಅಹ್ಮದ್, ಎಂ.ಡಿ ಖಾಜಾ ಗೆಸುದರಾಜ್, ಮಮ್ತಾಝ್ ಅಹ್ಮದ್, ಗೌಸುದ್ದೀನ್ ಅಹ್ಮದ್, ನೂರ್ ಮುಹಮ್ಮದ್, ಮುಹಮ್ಮದ್ ಹಫೀಜ್, ನಸ್ರೀನ್ ಬೇಗಂ, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.







