ಕಲಬುರಗಿ| ಸುರಪುರ ಸಿಪಿಐ ಅಮಾನತಿಗೆ ಆಗ್ರಹಿಸಿ ಡಿ.8ರಂದು ಪ್ರತಿಭಟನೆ: ಅರ್ಜುನ ಭದ್ರೆ

ಕಲಬುರಗಿ: ಯಾದಗಿರಿಯ ಸುರಪುರ ಪೊಲೀಸ್ ಠಾಣೆಯ ಸಿಪಿಐ ಉಮೇಶ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಇದೇ ಡಿಸೆಂಬರ್ 8 ರಂದು ಕಲಬುರಗಿಯ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕರ (ಐಜಿಪಿ) ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿಪಿಐ ವಾಲ್ಮೀಕಿ ಮತ್ತು ದಲಿತ ಸಮುದಾಯಗಳಲ್ಲಿ ವಿಷ ಬೀಜ ಬಿತ್ತಿ ಅಶಾಂತಿ ವಾತಾವರಣ ಮೂಡಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುರಪುರದ ಸರ್ವೆ ನಂ.7/11 ರಲ್ಲಿ ಸರ್ಕಾರಿ ಸ್ವಾಮ್ಯದ ಸ್ಥಳದಲ್ಲಿ ಡಾ. ಅಂಬೇಡ್ಕರ್ ಪ್ರತಿಮೆ ಇದ್ದು, ಈ ಪ್ರತಿಮೆ ಹಿಂದುಗಡೆ 38 ಗುಂಟೆ ಜಮೀನಿದ್ದು, ಈ ಜಮೀನು ಗ್ರಂಥಾಲಯಕ್ಕೆ ಮಂಜೂರು ಮಾಡಲು ದಲಿತ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ಇದೇ ಸ್ಥಳದಲ್ಲಿ ನೀಲಿ ಧ್ವಜಗಳನ್ನು ನೆಡಲಾಗಿತ್ತು. ಆದರೆ, ವೇಣುಗೋಪಾಲ ಜೇವರ್ಗಿ ಎನ್ನುವರು ಡಾ.ಅಂಬೇಡ್ಕರ್ ಪ್ರತಿಮೆ ಹಿಂದುಗಡೆ ಇದ್ದ 38 ಗುಂಟೆ ಜಮೀನು ಹೈದ್ರಾಬಾದ್ ಶಿಕ್ಷಣ ಸಂಸ್ಥೆಗೆ ಒತ್ತುವರಿ ಮಾಡಲು ಪ್ರಯತ್ನಿಸಿದ್ದರು. ಇದಕ್ಕೆ ಸಿಪಿಐ ಉಮೇಶ ಸಹಕಾರ ನೀಡಿದ್ದರಿಂದ ಪ್ರತಿಮೆ ಹಿಂದುಗಡೆ ಇದ್ದ ನೀಲಿ ಧ್ವಜಗಳನ್ನು ಕಿತ್ತು ಅಲ್ಲಿ ವಾಲ್ಮೀಕಿ ಧ್ವಜ ಸ್ಥಾಪಿಸಿದ್ದಾರೆ ಎಂದು ದೂರಿದರು.
ಸಿಪಿಐ ಸ್ವಜಾತಿಯ ಪರವಾಗಿ ಕೆಲಸ ಮಾಡಿದ್ದು, ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಮತ್ತು ಎರಡು ಸಮುದಾಯಗಳಲ್ಲಿ ಶಾಂತಿ ವಾತಾವರಣ ಮೂಡಿಸಲು ಐಜಿಪಿ ಮತ್ತು ಗೃಹ ಸಚಿವರಿಗೆ ನಿಯೋಗ ಮನವಿ ಮಾಡಿದ್ದು, ಶೀಘ್ರದಲ್ಲಿ ಸಿಪಿಐಯನ್ನು ಅಮಾನತುಗೊಳಿಸದಿದ್ದರೆ 8 ರಂದು ಕಲಬುರಗಿಯ ಐಜಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಮಲ್ಲಿಕಾರ್ಜುನ ತಳ್ಳಳ್ಳಿ, ಮಲ್ಲಿಕಾರ್ಜುನ ಶಾಖಾನವರ ಇತರರಿದ್ದರು.







