ಕಲಬುರಗಿ | ಮುನ್ಸಿಪಲ್ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂ.18ರಂದು ಪ್ರತಿಭಟನೆ

ಕಲಬುರಗಿ: ಮುನ್ಸಿಪಲ್ ನೌಕರರ ವಿವಿಧ ಸಮಸ್ಯೆಗಳನ್ನು ಪರಿಹರಿಸಿ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ನೌಕರರ ಸಂಘದ ವತಿಯಿಂದ ಜೂನ್ 18ರಂದು ನಗರದ ಮುನ್ಸಿಪಲ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖಂಡ ಕೆ. ನೀಲಾ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 936 ಮುನ್ಸಿಪಲ್ ನೌಕರರು ಹಲವು ವರ್ಷಗಳಿಂದ ಖಾಯಂ ನೇಮಕಾತಿ, ವೇತನ ತಾರತಮ್ಯ, ಸೇವಾ ಭದ್ರತೆ ಕೊರತೆ, ಪದೋನ್ನತಿ ಸಮಸ್ಯೆ ಸೇರಿದಂತೆ ಹಲವು ಆಡಳಿತಾತ್ಮಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕ ದಿನಾಚರಣೆ ದಿನದಂದು ರಜೆ ನೀಡದೇ ಕೆಲಸಕ್ಕೆ ನಿಯೋಜಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುನ್ಸಿಪಲ್ ನೌಕರರ ಸೇವಾ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
936 ನೌಕರರ ಖಾಯಂ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಚಂದಮ್ಮ ಗೋಳಾ, ಶರಣು ಅತನೂರ್, ಸುಂದ್ರಬಾಯಿ, ಅಂಬಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.






