Kalaburagi | ‘ನನ್ನ ಮತ–ನನ್ನ ಹಕ್ಕು’ ಘೋಷಣೆಯೊಂದಿಗೆ ಧರಣಿ: ಮತದಾರರ ಹೆಸರು ಕೈಬಿಡದಂತೆ ಆಗ್ರಹ

ಕಲಬುರಗಿ: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ನನ್ನ ಮತ–ನನ್ನ ಹಕ್ಕು’ ಎಂಬ ಘೋಷಣೆಯೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಕೈಬಿಡದಂತೆ ಒತ್ತಾಯಿಸಿ ಶನಿವಾರ ಧರಣಿ-ಪ್ರತಿಭಟನೆ ನಡೆಸಲಾಯಿತು.
ಧರಣಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಅಧ್ಯಕ್ಷ ಸಲೀಂ ಅಹ್ಮದ್ ಚಿತ್ತಾಪುರಿ, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಅಗತ್ಯವಿದ್ದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಮೂಬೀನ್ ಅಹ್ಮದ್ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆದು 80 ವರ್ಷಗಳು ಕಳೆದಿದ್ದರೂ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ರಕ್ಷಣೆಗಾಗಿ ಮತ್ತೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಮತದಾನವು ಕೇವಲ ಹಕ್ಕಲ್ಲ, ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕಾಗಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸ್ಥಳಾಂತರ, ವಿಳಾಸ ಬದಲಾವಣೆ ಅಥವಾ ಇತರ ಕಾರಣಗಳಿಂದ ಯಾವುದೇ ಅರ್ಹ ಮತದಾರರ ಹೆಸರು ತಪ್ಪಾಗಿ ಕೈಬಿಡದಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಮುನ್ನ ಸೂಕ್ತ ನೋಟಿಸ್ ನೀಡಿ, ತಮ್ಮ ವಾದ ಮಂಡಿಸಲು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಎಸ್‌ಐಆರ್ ಪ್ರಕ್ರಿಯೆಯಿಂದ ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಮತದಾರರ ಹೆಸರುಗಳು ಅಳಿಸಿಹೋಗುವ ಆತಂಕವಿದೆ ಎಂದು ಮುಖಂಡರು ಕಳವಳ ವ್ಯಕ್ತಪಡಿಸಿದರು. ಕಲಬುರಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಮೂರು ಲಕ್ಷ ಮತದಾರರ ಹೆಸರುಗಳನ್ನು ಅಳಿಸುವ ಸಾಧ್ಯತೆ ಇದೆ ಎಂಬ ವರದಿಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಅವರು, ಪ್ರತಿಯೊಂದು ಹೆಸರನ್ನೂ ಸೂಕ್ತವಾಗಿ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
‘ನನ್ನ ಮತ–ನನ್ನ ಹಕ್ಕು’, ‘ನನ್ನ ಮತ–ನನ್ನ ಧ್ವನಿ’, ‘ನನ್ನ ಮತ–ನನ್ನ ಭವಿಷ್ಯ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.
ಧರಣಿಯಲ್ಲಿ JAC ಕಾರ್ಯದರ್ಶಿ ಅಫ್ಜಲ್ ಮೆಹಮೂದ್, ಸಾಮಾಜಿಕ ಕಾರ್ಯಕರ್ತ ಅಯ್ಯುಬ್ ಖಾನ್, ಜಿಲ್ಲಾ ಕಾರ್ಯದರ್ಶಿ ಅಡ್ವೊಕೇಟ್ ಅಬ್ದುಲ್ ಖಾದರ್, ಹೈದರ್ ಅಲಿ ಬಾಗ್ಬಾನ್, ನಗರ ಅಧ್ಯಕ್ಷ ಮುನೀರ್ ಹಾಶ್ಮಿ, ಜಿಲ್ಲಾ ಸಮಿತಿ ಸದಸ್ಯ ನಸೀರುದ್ದೀನ್ ಸಾಹೇಬ್, ಯುವ ಅಧ್ಯಕ್ಷ ಫಹಾದ್ ಮೊಹ್ಸಿನ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.






