Kalaburagi | ಮಕ್ಕಳಿಗೆ ಉತ್ತಮ ಆಹಾರ, ಶಿಕ್ಷಣ, ಅಗತ್ಯ ಸೌಲಭ್ಯ ಒದಗಿಸಿ: ಡಾ.ಎನ್.ಮಹೇಶ ಬಾಬು

ಕಲಬುರಗಿ : ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಸ್ವಯಂಸೇವಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳು ಮತ್ತು ಮಹಿಳೆಯರಿಗೆ ಉತ್ತಮ ಗುಣಮಟ್ಟದ ಆಹಾರ, ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಹಾಗೂ ಕಲಬುರಗಿ ಜಿಲ್ಲಾ ನೋಡಲ್ ಅಧಿಕಾರಿ ಡಾ. ಎನ್. ಮಹೇಶ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲೆಯ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಾಜ್ಯ ಮಹಿಳಾ ನಿಲಯದ ಆವರಣದಲ್ಲಿ ಬೆಳೆಸಿರುವ ಹಣ್ಣು, ತರಕಾರಿ ಹಾಗೂ ಸೊಪ್ಪಿನ ಕೈತೋಟವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಬ್ಬಂದಿಯ ಪರಿಸರ ಸ್ನೇಹಿ ಕಾರ್ಯವನ್ನು ಶ್ಲಾಘಿಸಿದ ಅವರು, ಇಂತಹ ಮಾದರಿ ಕೈತೋಟಗಳು ಇತರ ಸಂಸ್ಥೆಗಳಿಗೂ ಪ್ರೇರಣೆಯಾಗಬೇಕು ಎಂದರು.
ಅದೇ ಆವರಣದಲ್ಲಿರುವ ರಾಜ್ಯ ಉದ್ಯೋಗಸ್ಥ ಮಹಿಳಾ ವಸತಿ ನಿಲಯದ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡುವಂತೆ ಸೂಚಿಸಿದರು. ಬಳಿಕ ಜಾನಿಮಿಯಾ ಲೇಔಟ್, ಅಕ್ಕಮಹಾದೇವಿ ಕಾಲೋನಿ ಹಾಗೂ ಸಂಗಮತಾಯಿ ಲೇಔಟ್‌ನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣವನ್ನು ವ್ಯವಸ್ಥಿತವಾಗಿ ನೀಡುವಂತೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಾರ್ಗದರ್ಶನ ನೀಡಿದರು.
ನಂತರ ಶಕ್ತಿ ಸದನ (ಸ್ವಾಧಾರ ಗೃಹ), ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆ, ಅಂಬುಬಾಯಿ ಅಂಧ ಹೆಣ್ಣು ಮಕ್ಕಳ ಶಾಲೆ ಹಾಗೂ ಅಂಜನಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಕಲಿಕಾ ಪ್ರಗತಿ ಹಾಗೂ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ಚಿಂಚೋಳಿ ತಾಲೂಕಿನ ಗೌತಮಿ ಗ್ರಾಮೀಣ ಸ್ವಯಂಸೇವಾ ಸಂಸ್ಥೆಯ ಬಾಲಕಿಯರ ವಸತಿ ನಿಲಯ, ವಿಮುಕ್ತಿ ಜ್ಞಾನದರ್ಶನ ಶಿಕ್ಷಣ ಸಂಸ್ಥೆಯ ಸಾಂತ್ವನ ಕೇಂದ್ರ ಹಾಗೂ ಎಂ.ಎಸ್.ಪಿ.ಟಿ.ಸಿ. ಕೇಂದ್ರಗಳಿಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ನಿರೂಪಣಾಧಿಕಾರಿ ಮುರಗೇಶ ಗುಣಾರಿ, ಸಹಾಯಕ ನಿರ್ದೇಶಕ ಶಿವಶರಣಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ ಹುಸೇನ್ ಖಾನ್ ಸೇರಿದಂತೆ ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.






