ಕಲಬುರಗಿ | ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ : ಶರವಣ ಟಿ.ಎ.

ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಿನ ಕಿದ್ವಾಯಿ ಆಸ್ಪತ್ರೆಯ ವೈದ್ಯರು ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತು ಭರವಸೆಗಳ ಸಮಿತಿಯ ಅಧ್ಯಕ್ಷರಾದ ಶರವಣ ಟಿ.ಎ. ಹೇಳಿದರು.
ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಿಷತ್ ಭರವಸೆಗಳ ಸಮಿತಿಯ ಅಧ್ಯಯನ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ಫೆರಿಫೆರಲ್ ಕ್ಯಾನ್ಸರ್ ಕೇಂದ್ರದಿಂದ ರೀಜನಲ್ ಕ್ಯಾನ್ಸರ್ ಕೇಂದ್ರವಾಗಿ ಪರಿವರ್ತಿಸಲು 80 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.
ಬಡವರು ಆರ್ಥಿಕವಾಗಿ ಹಿಂದುಳಿದವರು ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಮತ್ತು ಈ ಭಾಗದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಪ್ರಯಾಣಸುವ ಸಂದರ್ಭದಲ್ಲಿ ಮೃತರಾಗುವ ಸಂಭವ ಇರುತ್ತದೆ, ಇದನ್ನು ಮನಗಂಡ ಸರ್ಕಾರ ಕಿದ್ವಾಯಿ ಆಸ್ಪತ್ರೆಯನ್ನು ಸ್ಥಾಪಿಸಿ, ಅನುಕೂಲ ಮಾಡಿಕೊಟ್ಟಿದೆ. 210 ಬೆಡ್‍ಗಳ ಪೆರಿಫರಲ್ ಕ್ಯಾನ್ಸರ್ ಆಸ್ಪತ್ರೆಯನ್ನು ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇಲ್ಲಿನ ಆಸ್ಪತ್ರೆಗೆ ಯಂತ್ರೋಪಕರಣಗಳು, ವೈದ್ಯಾಧಿಕಾರಿಗಳ ಸಮಸ್ಯೆ ಪ್ರತಿಯೊಂದು ಕೊರತೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ನವೀನ ಟಿ., ಆಡಳಿತಾಧಿಕಾರಿ ಡಾ.ನವೀನ ಭಟ್ ಆಸ್ಪತ್ರೆಯಲ್ಲಿ ಮಾಡಿದ ಶಸ್ತ್ರಚಿಕಿತ್ಸೆಗಳು, ಉಪಕರಣಗಳು ಸಿಬ್ಬಂದಿಗಳ ಕೊರತೆ ಪ್ರತಿಯೊಂದನ್ನು ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು.
ಈ ಭಾಗದಲ್ಲಿ ಸಾಮಾನ್ಯ ಪುರುಷರಿಗೆ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಶ್ವಾಸಕೋಶ, ಅನ್ನನಾಳ ಮತ್ತು ಹೊಟ್ಟೆ ಕ್ಯಾನ್ಸರ್, ಕೊಲೋರೆಕ್ಟಲ್, ಮಹಿಳೆಯರ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗಳು ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆಯಲು ರಾಜ್ಯದ ನಿವಾಸಿಗಳು ಹೊರತು ಬೇರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬರುತ್ತಿದ್ದಾರೆ, ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಸರ್ಕಾರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೂಹಸೀನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿದರು.
ಸ್ವಯಂ ಸೇವಾ ಸಂಸ್ಥೆಯಾದ ಇಂಡಿಯನ್ ಕ್ಯಾನ್ಸರ್ ಸೊಸೈಟಿ ವತಿಯಿಂದ ಪ್ರೋಟೀನ್ ಪೌಡರ್ ಕಿಟ್ ಅನ್ನು ರೋಗಿಗಳಿಗೆ ನೀಡಲಾಯಿತು. ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಮಂಜುನಾಥ ಭಂಡಾರಿ, ಪ್ರತಾಪ ಸಿಂಹ ನಾಯಕ, ಬೆಂಗಳೂರಿನ ಕಾರ್ಯದರ್ಶಿಗಳು ಸೇರಿದಂತೆ ಕಿದ್ವಾಯಿ ಸಂಸ್ಥೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.