ಕಲಬುರಗಿ | ಕರಕುಶಲ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ : ಡಿಸಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ: ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸುವ ಕರಕುಶಲ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಆರ್ಥಿಕ ಚಟುವಟಿಕೆ ಚೇತರಿಕೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಡಿಸಿ ಬಿ.ಫೌಝಿಯಾ ತರನ್ನುಮ್ ಹೇಳಿದ್ದಾರೆ.
ಗುರುವಾರ ನಗರದ ಕನ್ನಡ ಭವನದಲ್ಲಿ ಹುಬ್ಬಳ್ಳಿಯ ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಅಭಿವೃದ್ಧಿ ಮತ್ತು ಸಹಾಯಕ ಕಚೇರಿಯಿಂದ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಪಿಎಂ ವಿಶ್ವಕರ್ಮ ವಸ್ತು ಪ್ರದರ್ಶನ–ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಸುತ್ತಮುತ್ತಲಿನ ಸಣ್ಣ ಅಥವಾ ಮಧ್ಯಮ ಉದ್ದಿಮೆಗಳು ಹಾಗೂ ಮಹಿಳಾ ಉದ್ಯಮದಾರರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪಾಲ್ಗೊಂಡು ಸ್ವಯಂ ಉದ್ಯೋಗದಾರರ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕೆಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಆಸಕ್ತಿಯಿಂದ ವಿವಿಧ ಮಳಿಗೆಗಳಿಗೆ ತೆರಳಿ ವಿವಿಧ ಉತ್ಪನ್ನಗಳ ಬಗ್ಗೆ ಕ್ಯೂಮಾಹಿತಿ ಪಡೆದುಕೊಂಡರು.
ಈ ವಸ್ತು ಪ್ರದರ್ಶನದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು 50 ಮಳಿಗೆಗಳು ಹಾಕಲಾಗಿದೆ. ಕೃತಕ ಆಭರಣ, ಬಿದಿರಿನ ಬುಟ್ಟಿ, ಹ್ಯಾಂಡ್ ಮೇಡ್ ಬ್ಯಾಗ್, ಮರದಿಂದ ತಯಾರಿಸಿದ ಆಟಿಕೆಗಳು, ಬಂಜಾರ ಸಮುದಾಯದ ಉಡುಪುಗಳು, ಖಾದಿ ಬಟ್ಟೆ, ಚನ್ನಪಟ್ಟಣ್ಣದ ಗೊಂಬೆಗಳು, ಕೈಮಗ್ಗ ಸೀರೆ, ವಿವಿಧ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆ ವರೆಗೆ ಸಾರ್ವಜನಿಕರಿಗೆ ಮಾರಾಟ ಮೇಳ ಮುಕ್ತವಾಗಿರಲಿದೆ.
ಎಂ.ಎಸ್.ಎಂ.ಇ- ಡಿಎಫ್ಓ ಹುಬ್ಬಳ್ಳಿ ಕಚೇರಿಯ ಜಂಟಿ ನಿರ್ದೇಶಕ ಶಶಿಕುಮಾರ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನಿರ್ದೇಶಕ ಬಿ.ಎಸ್.ಜವಳಗಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಗೌರವ ಗುಪ್ತಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ಜಾಫರ್ ಖಾಸಿಮ್ ಅನ್ಸಾರಿ ಉಪಸ್ಥಿತರಿದ್ದರು.







