ಕಲಬುರಗಿ | ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ : ಜಿಲ್ಲಾಧಿಕಾರಿ ಸೂಚನೆ

ಕಲಬುರಗಿ : ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ರಮವಾಗಿ ಮರಳು ಸಾಗಾಟ ಕಂಡುಬಂದಲ್ಲಿ ಅದನ್ನು ಜಪ್ತಿ ಮಾಡಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಇಟ್ಟು, ನಿಯಮಾನುಸಾರ ಸಾರ್ವಜನಿಕರಿಗೆ ಮಾಹಿತಿ ನೀಡಿ ಹರಾಜು ಮಾಡಬೇಕೆಂದರು.
ಬೇಸಿಗೆಯಲ್ಲಿ ಅಕ್ರಮ ಮರಳು ದಂಧೆ ಕುರಿತು ದೂರು ಬಂದ್ರೆ ಸುಮ್ಮನಿರುವುದಿಲ್ಲ. ತಹಶೀಲ್ದಾರರು, ಲೋಕೋಪಯೋಗಿ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ತೀವ್ರಗೊಳಿಸುವ ಮೂಲಕ ಸ್ಯಾಂಡ್ ಮಾಫಿಯಾ ನಿಯಂತ್ರಿಸಬೇಕು ಎಂದ ಅವರು, ನದಿ ಪಾತ್ರದ ಗ್ರಾಮದಲ್ಲಿ ಮುನ್ನೆಚ್ಚರಿಕೆಯಾಗಿ ಗ್ರಾಮ ಸಭೆ ನಡೆಸಿ ಅಕ್ರಮ ಮರಳು ಸಾಗಾಟ ಮಾಡದಂತೆ ಅರಿವು ಮೂಡಿಸಬೇಕು ಎಂದರು.
ಇನ್ನು ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಕಾರ್ಯಚರಣೆಯಲ್ಲಿವೆ ? ಎಂಬುದನ್ನು ಪರೀಕ್ಷಿಸಬೇಕು. ಅಫಜಲಪೂರ ತಾಲೂಕಿನ ಮಣ್ಣೂರ, ಮಾಶಾಳ, ಚೌಡಾಪುರ ತನಿಖಾ ಠಾಣೆಯಲ್ಲಿ ಸಿ.ಸಿ.ಟಿ.ವಿ ಅಳವಡಿಸಬೇಕು ಎಂದರು.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಗೋಡಿ, ಇವಣಿ, ದಂಡೋತಿ ಹಾಗೂ ಶಹಬಾದ್ ತಾಲೂಕಿನ ಮಾಲಗತ್ತಿಯಲ್ಲಿ ಪಟ್ಟಾ ಜಮೀನಿನಲ್ಲಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ-1994ರ ನಿಯಮ 31(z) ರಂತೆ ಮರಳು ತೆರವುಗೊಳಿಸಲು ಸಭೆ ಒಪ್ಪಿಗೆ ಸೂಚಿಸಿತು.
ಮೂರು ಕಡೆ ಕಲ್ಲು ಗಣಿಗಾರಿಕೆಗೆ ಅನುಮೋದನೆ :
ಇದೇ ಸಂದರ್ಭದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಸಹ ನಡೆಸಿದ ಜಿಲ್ಲಾಧಿಕಾರಿಗಳು, ಸೇಡಂ ಮತ್ತು ಚಿಂಚೋಳಿ ತಾಲೂಕಿನ ಮೂರು ಕಡೆ ಗಣಿಗಾರಿಕೆ ನಂತರ ಮರುಭರ್ತಿಯ ಷರತ್ತು ವಿಧಿಸಿ ಕಲ್ಲು ಗಣಿಗಾರಿಕೆ ನಡೆಸಲು ಸಭೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಎಫ್ ಸಮಿತ್ ಪಾಟೀಲ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ, ಲೋಕೋಪಯೋಗಿ ಇ.ಇ. ಸುಭಾಷ, ಹಿರಿಯ ಭೂ ವಿಜ್ಞಾನಿಗಳು, ತಹಶೀಲ್ದಾರರು ಸೇರಿದಂತೆ ಇತರೆ ಅಧಿಕಾರಿಗಳಿದ್ದರು.







