Kalaburagi | ಯಡ್ರಾಮಿಯಲ್ಲಿ ಬಿಸಿಲಿನ ತಾಪಕ್ಕೆ ತಂಪೆರೆದ ಮಳೆ

ಯಡ್ರಾಮಿ: ಕಳೆದ ಎರಡು ತಿಂಗಳಗಳಿಂದ ಉರಿಯುತ್ತಿರುವ ತೀವ್ರ ಬಿಸಿಲಿನಿಂದ ತತ್ತರಿಸಿದ್ದ ಯಡ್ರಾಮಿ ತಾಲೂಕಿನ ಜನತೆಗೆ ಗುರುವಾರ ಸಂಜೆ ಸುರಿದ ಸಾಧಾರಣ ಮಳೆ ಕೊಂಚ ನಿರಾಳತೆ ನೀಡಿತು. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ನಂತರ ಸುಮಾರು ಒಂದು ಗಂಟೆ ಕಾಲ ತಾಲೂಕಿನ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಯಿತು. ಇದರಿಂದ ಬಿಸಿಲಿನ ತಾಪ ಕಡಿಮೆಯಾಗಿ ವಾತಾವರಣ ತಂಪುಗೊಂಡಿತು.
ಬೆಳಗ್ಗೆಯಿಂದಲೇ ಯಡ್ರಾಮಿ ಪಟ್ಟಣ ಸೇರಿದಂತೆ ಹಲವೆಡೆ ತೀವ್ರ ಬಿಸಿಲು ಕಂಡುಬಂದಿತ್ತು. ಆದರೆ ಸಂಜೆ ಸುಮಾರು 4 ಗಂಟೆಯ ಬಳಿಕ ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿಕೊಂಡು ಬಳಿಕ ಮಳೆ ಬಂದಿದೆ.
ಯಡ್ರಾಮಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಕೆಲವೆಡೆ ಗಾಳಿ ಜೋರಾಗಿದ್ದು ಸಿಡಿಲು ಗುಡುಗು ಸಹ ಕೇಳಿಬಂತು.
ರೈತ ಸಮುದಾಯದಲ್ಲೂ ಮಳೆ ಸಂತಸ ಮೂಡಿಸಿದೆ. ಮುಂಗಾರು ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ರೈತರು ಮಳೆಯು ಭೂಮಿಗೆ ತೇವಾಂಶ ನೀಡಿದ್ದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಳೆಯ ನಂತರ ಯಡ್ರಾಮಿ ಪಟ್ಟಣದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ.




