Kalaburagi | ಅಂಬೇಡ್ಕರ್ ಅವರ ಹೋರಾಟದ ಬೆನ್ನ ಹಿಂದಿನ ಬೆಳಕು ರಮಾತಾಯಿ: ಪ್ರೊ.ಅಶ್ವಿನಿ ಜಾನೆ

ಕಲಬುರಗಿ: ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆ ಇಂದಿಗೂ ನಾಲ್ಕು ಗೋಡೆಗಳ ಮಧ್ಯೆ ಬದುಕುವಂತಾಗಿದೆ. ವಿಘಟನೆಯತ್ತ ಸಾಗುತ್ತಿರುವ ಕುಟುಂಬ ಮತ್ತು ಸಮಾಜದ ಸುಧಾರಣೆಗೆ ಮಹಿಳೆ ಧೀಶಕ್ತಿಯಾಗಿ ನಿಲ್ಲಬೇಕು. ಅದೇ ರೀತಿ ಸಮಾಜವೂ ಮಹಿಳೆಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ಅಶ್ವಿನಿ ಬಿ.ಜಾನೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ಆರ್ಟ್ ಥಿಯೇಟರ್, ಸೂರ್ಯನಗರಿ ಸಂಸ್ಕೃತಿ ಕಲಾ ಸಂಘ, ಪಂಚಶೀಲ ಸೇವಾ ಟ್ರಸ್ಟ್, ಸಂಸ್ಕಾರ ಪ್ರತಿಷ್ಠಾನ ಹಾಗೂ ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ನಾಡಹಬ್ಬದ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅವರು ಅವರ ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ಹೋರಾಟಕ್ಕೆ ಅಪಾರ ಆತ್ಮಸ್ಥೈರ್ಯ ತುಂಬಿದ್ದರು. ರಮಾತಾಯಿಯವರ ತ್ಯಾಗ, ಸಹನೆ ಮತ್ತು ಬೆಂಬಲದಿಂದಲೇ ಅಂಬೇಡ್ಕರ್ ಅವರು ಆಲದ ಮರದಂತೆ ಬೆಳೆದು ನಿಲ್ಲಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ವ್ಯಕ್ತಿಗತ ನಾಟಕಗಳು ಕೇವಲ ವ್ಯಕ್ತಿಯ ಬದುಕಿನ ಘಟನೆಗಳನ್ನು ಬಿಂಬಿಸುವುದಲ್ಲದೆ, ಅವರ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾದ ಸಾಮಾಜಿಕ ಪರಿಸರ ಹಾಗೂ ಸನ್ನಿವೇಶಗಳನ್ನು ಪರಿಚಯಿಸುತ್ತವೆ. ಇದಕ್ಕೆ ‘ರಮಾಬಾಯಿ’ ನಾಟಕ ಉತ್ತಮ ಉದಾಹರಣೆಯಾಗಿದ್ದು, ಅವರು ಅಂಬೇಡ್ಕರ್ ಅವರ ಹೋರಾಟದ ಬೆನ್ನ ಹಿಂದಿನ ಬೆಳಕಾಗಿದ್ದರು ಎಂದರು.
ಕಥೆಗಾರ ಮಹಾಂತೇಶ ನವಲಕಲ್, ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ, ಕರ್ನಾಟಕ ಕಲ್ಯಾಣ ವಸತಿ ನಿಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ವಿದ್ಯಾಧರ ಕಾಂಬಳೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸೇವಂತಾಬಾಯಿ ಚವ್ಹಾಣ, ನಾಟಕಕಾರ ಸಿದ್ಧಲಿಂಗಯ್ಯ ಮಲಕೂಡ, ಸೂರ್ಯನಗರಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ರಾಜಕುಮಾರ ಎಸ್.ಕೆ. ಹಾಗೂ ಸಮಾಜ ಸೇವಕಿ ಮಾಲಾ ಕಣ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲಬುರಗಿ ಆರ್ಟ್ ಥಿಯೇಟರ್ ಅಧ್ಯಕ್ಷ ಸುನಿಲ ಮಾನಪಡೆ ಹಾಗೂ ಪಂಚಶೀಲ ಸೇವಾ ಸಂಸ್ಥೆಯ ಸಂಜೀವಕುಮಾರ ಕಾಂಬಳೆ ವೇದಿಕೆಯಲ್ಲಿದ್ದರು. ಕಪಿಲ್ ಚಕ್ರವರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ಡಾ. ಶ್ರೀಶೈಲ ಘೂಳಿ, ರಂಗ ಶಿಕ್ಷಕ ಸಿದ್ಧರಾಮ ರಾಜಮಾನೆ, ಸಾಹಿತ್ಯ ಸೇವೆಗಾಗಿ ಡಾ. ಶ್ರೀಶೈಲ ನಾಗರಾಳ ಹಾಗೂ ರಂಗ ಶಿಕ್ಷಕ ಅಶೋಕ ತೊಟ್ನಳ್ಳಿ ಅವರಿಗೆ ರಂಗಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಮಲ್ಲಿಕಾರ್ಜುನ ದೊಡ್ಡಮನಿ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕಲಬುರಗಿಯ ರಂಗವೃಕ್ಷ ನಾಟಕ ನೃತ್ಯ ಸೇವಾ ಸಂಘದ ಕಲಾವಿದರು ‘ಮಾತೋಶ್ರೀ ರಮಾತಾಯಿ ಅಂಬೇಡ್ಕರ್’ ನಾಟಕವನ್ನು ಪ್ರದರ್ಶಿಸಿದರು.






