ಕಲಬುರಗಿ | ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 35 ವರ್ಷ ಶಿಕ್ಷೆ 29 ಸಾವಿರ ರೂ. ದಂಡ

ಕಲಬುರಗಿ : ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕೋ) ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ 35 ವರ್ಷ ಜೈಲು ಶಿಕ್ಷೆ ಮತ್ತು 29 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಚಿಂಚೋಳಿ ತಾಲ್ಲೂಕಿನ ಆಯುರ್ವೆದಿಕ್ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಆದರ್ಶ ಪ್ರಭಾಕರ ಚಿಂದೆ (24) ಶಿಕ್ಷೆಗೆ ಒಳಗಾದ ಅಪರಾಧಿ. 14 ವರ್ಷದ ಬಾಲಕಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಸರಕಾರದ ಪರವಾಗಿ ಅಭಿಯೋಜಕರಾಗಿ ಶಾಂತವೀರ ಬಿ.ತುಪದ ಅವರು ವಾದ ಮಂಡಿಸಿದ್ದರು.
ಆರೋಪಿಗೆ ಪೋಕೋ ಕಾಯ್ದೆ ಅಡಿಯ ಅಪರಾಧಕ್ಕೆ 35 ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ದಂಡ, ಕೊಡಲು ತಪ್ಪಿದಲ್ಲಿ 6 ತಿಂಗಳು ಸಾಧಾ ಶಿಕ್ಷೆ. ಕಲಂ 363 ಐಪಿಸಿ ಅಡಿಯಲ್ಲಿ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು ರೂ. 6,000 ರೂ. ದಂಡ, ಕೊಡಲು ತಪ್ಪಿದ್ದಲ್ಲಿ 3 ತಿಂಗಳ ಸಾಧಾ ಶಿಕ್ಷೆ. ಕಲಂ 354(ಡಿ) ಐಪಿಸಿ ಅಡಿಯಲ್ಲಿ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಮತ್ತು 2,000 ರೂ. ದಂಡ, ದಂಡ ಕೊಡಲು ತಪ್ಪಿದ್ದಲ್ಲಿ1 ತಿಂಗಳ ಸಾಧಾ ಶಿಕ್ಷೆ ಕಲಂ 343 ಐಪಿಸಿ ಅಡಿಯಲ್ಲಿ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಮತ್ತು 1,000 ರೂ. ದಂಡ, ದಂಡ ಕೊಡಲು ತಪ್ಪಿದ್ದಲ್ಲಿ 1 ತಿಂಗಳ ಸಾಧಾ ಶಿಕ್ಷೆ ವಿಧಿಸಿದೆ.







