ಕಲಬುರಗಿ | ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಆರೋಪಿ ಆರ್.ಡಿ.ಪಾಟೀಲ್ ಮೈಸೂರು ಜೈಲಿಗೆ ಸ್ಥಳಾಂತರ

ಕಲಬುರಗಿ : ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣದ ಪ್ರಮುಖ ಆರೋಪಿ, ಕಿಂಗ್‌ಪಿನ್ ಆರ್.ಡಿ.ಪಾಟೀಲ್ ನನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಕಲಬುರಗಿ ಜೈಲಿನಲ್ಲಿ ಶಿಸ್ತು ಭಂಗ ಉಂಟುಮಾಡುತ್ತಿದ್ದ ಹಿನ್ನೆಲೆ ಹಾಗೂ ಜೈಲಿನ ಒಳಾಂಗಣ ವಾತಾವರಣ ಹಾಳಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಕಲಬುರಗಿ ಕೇಂದ್ರ ಕಾರಾಗೃಹದೊಳಗೆ ಜೂಜಾಟ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆಗೆ ಆರ್.ಡಿ. ಪಾಟೀಲ್ ಮಾಸ್ಟರ್‌ಮೈಂಡ್ ಎನ್ನಲಾಗಿದೆ. ಅಲ್ಲದೆ, ಜೈಲಿನ ಮುಖ್ಯ ಅಧೀಕ್ಷಕಿಯ ವಿರುದ್ಧ ಲಂಚದ ಆರೋಪ ಹೊರಿಸಿ, ಪೆನ್‌ಡ್ರೈವ್ ಮೂಲಕ ವಿಡಿಯೋಗಳನ್ನು ಹೊರಗೆ ಹರಿಬಿಟ್ಟಿದ್ದಾನೆ ಎಂಬ ಆರೋಪವೂ ಆತನ ಮೇಲಿದೆ.
ಈ ಪ್ರಕರಣಗಳ ಹಿನ್ನೆಲೆಯಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಸ್ವತಃ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಸೂಚನೆ ನೀಡಿದ್ದರು.
ಜೈಲಿನ ಶಿಸ್ತು ಹಾಗೂ ಆಡಳಿತ ವ್ಯವಸ್ಥೆಗೆ ಆರ್.ಡಿ. ಪಾಟೀಲ್‌ನಿಂದ ನಿರಂತರ ತೊಂದರೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕಾರಾಗೃಹ ಇಲಾಖೆ, ಆತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ ಎಂದು ಅಧಿಕೃತ ಪೊಲೀಸ್ ಮೂಲಗಳು ತಿಳಿಸಿವೆ.





