ಕಲಬುರಗಿ | ಬೆಳೆ ವಿಮೆ ಉಚಿತವಾಗಿ ನೊಂದಣಿ ಮಾಡಿಕೊಳ್ಳಿ: ರೇವಣಸಿದ್ಧ ಬಡಾ

ಕಲಬುರಗಿ: ರಟಕಲ್ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದ ಸದಸ್ಯರಿಗೆ ಉಚಿತವಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಯನ್ನು ಆನ್ ಲೈನ್ ಮೂಲಕ ಉಚಿತವಾಗಿ ಅರ್ಜಿ ಹಾಕಲಾಗುವುದು ಎಂದು ಸಂಘದ ಅಧ್ಯಕ್ಷರಾದ ರೇವಣಸಿದ್ಧ ಬಡಾ ತಿಳಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು 2025 - 26ನೇ ಸಾಲಿನ ಮುಂಗಾರು ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬೇಕು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಗಳಲ್ಲಿ ಶೇರುದಾರರ ಸದಸ್ಯರು ರೈತರು ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಮಾಡುತ್ತಿರುವ ಬೆಳೆಗಳ ಪೈಕಿ ಹಾಗೂ ಸರಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆ ವಿಮೆ ನೊಂದಣಿಗೆ ಜು.31 ರಂದು ಕಡೆಯ ದಿನಾಂಕವಾಗಿದೆ ಎಂದರು.
ಫಸಲ್ ಭೀಮಾ ಯೋಜನೆ ಮಾಡಲು ತೊಗರಿಗೆ ಪ್ರತಿ ಎಕರೆಗೆ 388 ರೂ., ಹೆಸರಿಗೆ 269 ರೂ., ಉದ್ದಿಗೆ 265 ರೂ, ಹಾಗೂ ಸೋಯಬಿನ್ ಬೆಳೆಗೆ 332 ರೂ. ಪ್ರತಿ ಎಕರೆಗೆ ಪಾವತಿಸಬೇಕು. ಹಾಗೂ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ರೈತರು ಕಡ್ಡಾಯವಾಗಿ ಎಫ್ ಐ ಡಿ ಸಂಖ್ಯೆಯನ್ನು ಹೊಂದಿರಬೇಕು ಹಾಗೂ ರೈತರು ಬೆಳೆಯುವ ಬೆಳೆಯ ಸರ್ವೇ ನಂಬರ್ ಅವರ ಎಫ್ ಐಡಿಯಲ್ಲಿ ನಮೂದಾಗಿರಬೇಕು ಎಂದು ತಿಳಿಸಿದರು.





