Kalaburagi | ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಜು.31ರವರೆಗೆ ನೋಂದಣಿ

ಕಲಬುರಗಿ: ರಾಜ್ಯ ಸರ್ಕಾರವು 2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (R-WBCIS) ಅನುಷ್ಠಾನಕ್ಕೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬುಧವಾರ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ತಮ್ಮ ಕಚೇರಿಯಲ್ಲಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಹೆಚ್ಚಿನ ರೈತರು ಯೋಜನೆಯ ಸೌಲಭ್ಯ ಪಡೆಯುವಂತೆ ಗ್ರಾಮೀಣ ಮಟ್ಟದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಂಕನೂರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐಎಎಸ್ ಅಧಿಕಾರಿ ಶಿಖರ ಮೋಘಾ ಹಾಗೂ ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ಉಪಸ್ಥಿತರಿದ್ದರು.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಪ್ಪಾಯ ಮತ್ತು ಹಸಿರು ಮೆಣಸಿನಕಾಯಿ ಬೆಳೆಗಳನ್ನು ಒಳಪಡಿಸಲಾಗಿದೆ. ದ್ರಾಕ್ಷಿ ಬೆಳೆಯನ್ನು ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರಗಿ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಯೋಜನೆಯಡಿ ಸೇರಿಸಲಾಗಿದೆ.
ಪ್ರತಿ ಹೆಕ್ಟೇರ್‌ಗೆ ಹಸಿರು ಮೆಣಸಿನಕಾಯಿಗೆ 3,550 ರೂ., ಪಪ್ಪಾಯಕ್ಕೆ 6,700 ರೂ. ಹಾಗೂ ದ್ರಾಕ್ಷಿಗೆ 14,000 ರೂ. ವಿಮಾ ಕಂತು ನಿಗದಿಪಡಿಸಲಾಗಿದೆ. ವಿಮಾ ಮೊತ್ತ ಕ್ರಮವಾಗಿ 71,000 ರೂ., 1.34 ಲಕ್ಷ ರೂ. ಹಾಗೂ 2.80 ಲಕ್ಷ ರೂ. ವಾಗಿ ನಿಗದಿಯಾಗಿದೆ.
ರೈತರು ಜುಲೈ 31ರೊಳಗೆ ತಮ್ಮ ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. 2026-27ನೇ ಸಾಲಿನ ಯೋಜನೆ ಅನುಷ್ಠಾನಕ್ಕೆ Agricultural Insurance Company (AIC) ಅನ್ನು ಕಲಬುರಗಿ ಜಿಲ್ಲೆಗೆ ವಿಮಾ ಕಂಪನಿಯಾಗಿ ಆಯ್ಕೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಡಳಿತ ತಿಳಿಸಿದೆ.






