ಕಲಬುರಗಿ | ಅಸಮಾನತೆ ನಿವಾರಣೆಗೆ ಅಕ್ಟೋಬರೊಳಗೆ ವರದಿ ಸಲ್ಲಿಕೆ: ಪ್ರೊ.ಎಂ.ಗೋವಿಂದರಾವ್

ಕಲಬುರಗಿ: ರಾಜ್ಯದಲ್ಲಿ ಅಸಮಾನತೆ ನಿವಾರಣೆಗೆ ಸಮಗ್ರ ವರದಿಯನ್ನು ಮುಂಬರುವ ಅಕ್ಟೋಬರ್ ತಿಂಗಳ ಒಳಗಾಗಿಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೋ.ಎಂ.ಗೋವಿಂದರಾವ್ ಹೇಳಿದ್ದಾರೆ.
ಗುರುವಾರ ಕಲಬುರಗಿ ನಗರದ ಕೆ.ಕೆ.ಆರ್.ಡಿ.ಬಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಮೂಲಸೌಕರ್ಯ ಹೀಗೆ 41 ಅಂಶಗಳಲ್ಲಿ ಇದೂವರೆಗಿನ ಫಲಿತಾಂಶದ ಆಧಾರದ ಮೇಲೆ ವರದಿ ನೀಡಲಾಗುತ್ತದೆ ಎಂದರು.
35 ಸೂಚ್ಯಂಕದ ಮೇಲೆ ರೂಪಗೊಂಡ ಡಾ.ಡಿ.ಎಂ.ನಂಜುಂಡಪ್ಪ ವರದಿ ಅಧಾರದದಲ್ಲಿ ಸಿ.ಡಿ.ಐ ಇಂಡೆಕ್ಸ್ ನಂತೆ ಅನುದಾನ ಹಂಚಿಕೆ ಮಾಡಿದರೂ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕಾಣದಿರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ, ಇದನ್ನು ಸರಿದೂಗಿಸಿ ವರದಿ ಸಿದ್ಧಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅಂದಿನ 175 ತಾಲೂಕಿನಲ್ಲಿ 39 ಅತ್ಯಂತ ಹಿಂದುಳಿದ ತಾಲೂಕುಗಳಿದ್ದು, ಹಿಂದುಳಿವಿಕೆ ತಾಲೂಕು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೀಮಿತವಲ್ಲ, ಎಲ್ಲಾ ಪ್ರದೇಶಕ್ಕೂ ಅನ್ವಯಿಸುತ್ತದೆ. ಈಗ 31 ಜಿಲ್ಲೆಗಳಲ್ಲಿ 240 ತಾಲ್ಲೂಕುಗಳು ಒಳಗೊಂಡಿವೆ. ಎಲ್ಲ ತರಹದ ಸೂಚ್ಯಂಕಗಳನ್ನು ಒಳಗೊಂಡ ಅಂಕಿ ಅಂಶಗಳನ್ನು ಸಮಿತಿಯು ವರದಿ ನೀಡುತ್ತಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಕೆ.ಕೆ.ಅರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಸಮಿತಿ ಸದಸ್ಯೆ ಸಂಗೀತಾ ಕಟ್ಟಿಮನಿ, ಯೋಜನೆ ಮತ್ರು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆರ್.ವಿಶಾಲ್, ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಇದ್ದರು.







