Kalaburagi | ಸಮಾಜದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂಶೋಧನೆ ಅಗತ್ಯ: ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ಸಂಶೋಧನೆಯು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಎಎನ್ಆರ್ಎಫ್–ಪೇರ್ ಕಾರ್ಯಕ್ರಮದಡಿ ಅನುಷ್ಠಾನಗೊಳ್ಳುತ್ತಿರುವ 16 ಸಂಶೋಧನಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಶೋಧಕರು ತಮ್ಮ ಆವಿಷ್ಕಾರಗಳನ್ನು ಪ್ರಾಯೋಗಿಕ ಅನ್ವಯಿಕೆಗಳಾಗಿ ಪರಿವರ್ತಿಸಿ, ಉತ್ಪಾದನಾ ವಲಯಕ್ಕೆ ತಲುಪಿಸಬೇಕು. ನವೀನ ಉತ್ಪನ್ನಗಳ ಅಭಿವೃದ್ಧಿ, ಸ್ಟಾರ್ಟಪ್ಗಳ ಉತ್ತೇಜನ ಹಾಗೂ ಉದ್ಯಮಶೀಲತೆಯ ಮೂಲಕ ಸಂಶೋಧನೆಯ ಫಲಿತಾಂಶಗಳು ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು ಎಂದು ಅವರು ತಿಳಿಸಿದರು.
ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಬ್ರಹ್ಮಾನಂದ ಮಾನವತಿ ಮತ್ತು ಪ್ರೊ. ಸಾಮ್ರಾಟ್ ಎಲ್. ಸಬತ್ ಅವರು 16 ಸಂಶೋಧನಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಮುಂದಿನ ಕಾರ್ಯಚಟುವಟಿಕೆಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಪ್ರಧಾನ ಸಂಶೋಧಕರಾದ ಪ್ರೊ. ಎನ್. ಸತ್ಯನಾರಾಯಣ, ಸಹ-ಪ್ರಧಾನ ಸಂಶೋಧಕರಾದ ಪ್ರೊ. ಭರತ್ ಕುಮಾರ್, ಪ್ರಾಧ್ಯಾಪಕರಾದ ಪ್ರೊ. ಪಲ್ಲೆಪೋಗು ರಾಘವಯ್ಯ, ಪ್ರೊ. ಹನುಮೇಗೌಡ, ಪ್ರೊ. ಜನಾರ್ದನ ರೆಡ್ಡಿ, ಡಾ. ಎಸ್. ಲಿಂಗಮೂರ್ತಿ, ಡಾ. ಆರ್. ಕೃಷ್ಣ ಚೈತನ್ಯ, ಡಾ. ರಸ್ಮಿತಾ ಸಾಮಾ, ಡಾ. ಪೊನ್ನಂ ಆಂಜನೇಯಲು, ಡಾ. ಹರೀಶ್ ಹೊಳ್ಳಾ, ಡಾ. ಕವಿತಾ ಹಿರೇಮಠ, ಡಾ. ರಾಕೇಶ್ ಕುಮಾರ್, ಡಾ. ಆಂಜನೇಯಲು, ಡಾ. ಕವಿಶಂಕರ್, ಡಾ. ಅಶೋಕ್ ಪಬ್ಬತ್ತಿ, ಡಾ. ಪ್ರಶಾಂತ ಕುಮಾರ್ ಮತ್ತು ಡಾ. ಪ್ರಭಂಜನ್ ಗಾಯಿ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






