Kalaburagi | ಪ್ರತಿ ವರ್ಷ ʼ371(ಜೆ) ಕಲಂ ಉತ್ಸವ ದಿನಾಚರಣೆʼಗೆ ನಿರ್ಣಯ

ಕಲಬುರಗಿ, ಜೂ.13: ದಶಕಗಳ ಹೋರಾಟ ಮತ್ತು ಸಂಘಟಿತ ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರೆತಿರುವ ಸಂವಿಧಾನಬದ್ಧ ವಿಶೇಷ ಸ್ಥಾನಮಾನವಾದ 371(ಜೆ) ಕಲಂ ಸ್ಮರಣಾರ್ಥವಾಗಿ ಪ್ರತಿ ವರ್ಷ ಜನವರಿ 1ರಂದು “371(ಜೆ) ಉತ್ಸವ ದಿನಾಚರಣೆ”ಯನ್ನು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಆಚರಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.
ನಗರದಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ಕಾಲೇಜುಗಳ ಪ್ರಾಚಾರ್ಯರು, ಪರಿಣಿತ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ, 371(ಜೆ) ಕಲಂ ಜಾರಿಗೆ ಬಂದ ದಿನವು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು, ಯುವಕರು ಹಾಗೂ ನಿರುದ್ಯೋಗಿಗಳ ಭವಿಷ್ಯವನ್ನು ಪ್ರತಿನಿಧಿಸುವ ಹಕ್ಕಿನ ದಿನವಾಗಿದೆ. ರಾಷ್ಟ್ರಪತಿಗಳ ಅಂಕಿತದೊಂದಿಗೆ 2013ರ ಜನವರಿಯಲ್ಲಿ ಜಾರಿಗೆ ಬಂದ ಈ ವಿಶೇಷ ಸ್ಥಾನಮಾನವನ್ನು ಸ್ಮರಿಸಿ ಪ್ರತಿವರ್ಷ ಜನವರಿ 1ರಂದು ಉತ್ಸವ ದಿನಾಚರಣೆಯಾಗಿ ಆಚರಿಸಬೇಕು ಎಂದು ಪ್ರಸ್ತಾಪಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಮಾತನಾಡಿ, 371(ಜೆ) ಕಲಂನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ಕಲಂನ ಆಶಯ, ಸಾಧನೆಗಳು ಮತ್ತು ಪ್ರಯೋಜನಗಳ ಕುರಿತು ಜನಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಎಂಎಲ್ಸಿ ಬಿ.ಜಿ. ಪಾಟೀಲ ಮಾತನಾಡಿ, ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸಿ, 371(ಜೆ) ಹೋರಾಟದ ಇತಿಹಾಸ, ರಾಜಕೀಯ ಇಚ್ಛಾಶಕ್ತಿ ಮತ್ತು ಇದರ ಲಾಭಗಳ ಕುರಿತು ವಿದ್ಯಾರ್ಥಿಗಳಿಗೆ ಕರಪತ್ರಗಳ ಮೂಲಕ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಾರ್ಯವೈಖರಿ ಹಾಗೂ ಗೋವಿಂದರಾವ್ ಸಮಿತಿಯ ವರದಿ ಕುರಿತು ವಿಸ್ತೃತ ಚರ್ಚೆ ನಡೆಯಿತು. 371(ಜೆ) ಕಲಂನ ಸಮರ್ಪಕ ಅನುಷ್ಠಾನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಪ್ರತ್ಯೇಕ ಸಚಿವಾಲಯವನ್ನು ಕಾಲಮಿತಿಯೊಳಗೆ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು.
ಸಭೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕರು, ಪರಿಣಿತರು ಹಾಗೂ ನೂರಾರು ಗಣ್ಯರು ಭಾಗವಹಿಸಿದ್ದರು. ಮುಂದಿನ ಹಂತದಲ್ಲಿ ಸಚಿವರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ಬೃಹತ್ ವಿಚಾರ ಸಂಕಿರಣ ಆಯೋಜಿಸಿ, ನಂತರ ಕಾಲೇಜುಗಳಲ್ಲಿ ಸರಣಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸ್ಟ್ಯಾನಿ ಲೋಭೋ, ಸನಾವುಲ್ಲಾ, ಡಾ. ಪ್ರತಾಪಸಿಂಗ್ ತಿವಾರಿ, ಶಂಕರ ಪಾಟೀಲ, ಶರಣು ಪಪ್ಪಾ, ಕೈಲಾಸನಾಥ ದೀಕ್ಷಿತ, ಡಾ. ಸುಜಾತಾ ಜಂಗಮಶೆಟ್ಟಿ, ಪಂಡಿತರಾವ ಚಿದರಿ, ವಿನಯ ಮಾಳಗೆ, ಅಸದ್ ಅಲಿ ಅನ್ಸಾರಿ, ಹಾಜಿ ರಿಜ್ವಾನ ಸಿದ್ದಿಖಿ, ಕಲ್ಯಾಣರಾವ ತೊನ್ಸಳ್ಳಿ, ಬಸವರಾಜ ಕುಮನೂರ, ಆರ್.ಕೆ.ಹುಡಗಿ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.






