ಕಲಬುರಗಿ | ಪಾಸ್ ನವೀಕರಣ ಗೊಂದಲ ಬಗೆಹರಿಸಿ : ಹಣಮಂತ ಶೇರಿ ಒತ್ತಾಯ

ಕಲಬುರಗಿ: ವಿಕಲಚೇತನರ ಬಸ್ ಪಾಸ್ ನವೀಕರಣದ ವೇಳೆ ಬಸ್ ಪಾಸ್ ವಿತರಣೆ ಕೌಂಟರ್‌ಗಳಲ್ಲಿ ವಿನಾಕಾರಣವಾಗಿ ಸಂಬಂಧವಿಲ್ಲದ ದಾಖಲೆಗಳನ್ನು ಕೇಳಿ ವಿಕಲಚೇತನರನ್ನು ಸುಖಾಸುಮ್ಮನೆ ಓಡಾಡಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ಶೇರಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ನಿಯಮಗಳನ್ನು ಸರಳಗೊಳಿಸುವ ಬದಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸ್ಟ್ಯಾಂಪ್ ಪೇಪರ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅನಗತ್ಯ ದಾಖಲೆಗಳನ್ನು ಕೇಳಿ ವಿಕಲಚೇತನರಿಗೆ ಪಾಸ್ ನೀಡುವಲ್ಲಿ ಸತಾಯಿಸಲಾಗುತ್ತಿದೆ ಎಂದು ದೂರಿದ್ದಾರೆ.
ಸೇವಾ ಸಿಂಧು ಪೋರ್ಟಲ್‌ನಲ್ಲಿ ಈಗಾಗಲೇ ಅಪ್‌ಲೋಡ್ ಮಾಡಿರುವ ದಾಖಲೆಗಳನ್ನೇ ನವೀಕರಣ ಸಂದರ್ಭದಲ್ಲಿ ಪರಿಗಣಿಸಬೇಕು. ಡಿಜಿಲಾಕರ್ ವ್ಯವಸ್ಥೆ ಮೂಲಕ ಆಧಾರ್ ಸಂಖ್ಯೆ ನಮೂದಿಸಿದರೆ ಅಗತ್ಯ ಮಾಹಿತಿಗಳು ತಕ್ಷಣ ಲಭ್ಯವಾಗುತ್ತವೆ. ಇಂತಹ ಸೌಲಭ್ಯಗಳಿದ್ದರೂ ವಿಕಲಚೇತನರನ್ನು ಅನಗತ್ಯವಾಗಿ ಕಚೇರಿಗಳ ಸುತ್ತ ಅಲೆದಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ವಿಭಾಗದ ಕೆಲ ಕೌಂಟರ್‌ಗಳಲ್ಲಿ ಅಗತ್ಯ ಮಾಹಿತಿಯ ಫಲಕಗಳನ್ನು ಪ್ರದರ್ಶಿಸಿಲ್ಲ. ಪ್ರಶ್ನಿಸಿದರೆ ಕೌಂಟರ್ ಸಿಬ್ಬಂದಿಯಿಂದ ಅಸಮಂಜಸ ಉತ್ತರಗಳು ಬರುತ್ತಿವೆ. ಅಲ್ಲದೆ, ಕೆಲ ನಿರ್ವಾಹಕರು ಸ್ಟ್ಯಾಂಪ್ ಪೇಪರ್ ಮತ್ತು ಝರಾಕ್ಸ್ ಅಂಗಡಿಗಳ ಮಾಲೀಕರೊಂದಿಗೆ ಕೈಜೋಡಿಸಿ ವಿಕಲಚೇತನರಿಂದ ಹಣ ವಸೂಲಿ ಮಾಡುವ ಆರೋಪವನ್ನೂ ಅವರು ಮಾಡಿದ್ದಾರೆ.
ಸದ್ಯ ಎಐ ತಂತ್ರಜ್ಞಾನವನ್ನು ಬಳಸಿ ಅನರ್ಹರನ್ನು ಗುರುತಿಸಿ ನೈಜ ವಿಕಲಚೇತನರಿಗೆ ಮಾತ್ರ ಬಸ್ ಪಾಸ್ ನೀಡುವತ್ತ ನಿಗಮ ಗಮನ ಹರಿಸಬೇಕು. ಅರ್ಹ ವಿಕಲಚೇತನರಿಗೆ ಕಿರುಕುಳ ನೀಡುವ ಬದಲು ನಿಗಮ ತನ್ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂಬಂಧ ನಾಲ್ಕು ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿ ಎದುರು ವಿಕಲಚೇತನರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಹಣಮಂತ ಶೇರಿ ಎಚ್ಚರಿಕೆ ನೀಡಿದ್ದಾರೆ.







