ಕಲಬುರಗಿ:ನಿವೃತ್ತ ನರ್ಸ್ ಎಡವಟ್ಟು ಆರೋಪ: ಬಾಣಂತಿ, ನವಜಾತ ಶಿಶು ಮೃತ್ಯು

ಮೃತ ಬಾಣಂತಿ ಶ್ರೀದೇವಿ
ಕಲಬುರಗಿ: ಇಲ್ಲಿನ ವಾಡಿ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನರ್ಸ್ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಮೃತ ಮಹಿಳೆಯ ಪತಿ ವೀರೇಶ ಪ್ರಭ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ಶ್ರೀದೇವಿ ಎಂಬ ಬಾಣಂತಿ ವಾಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಂಗೂಬಾಯಿ ಅವರು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಪತ್ನಿ ಶ್ರೀದೇವಿ ಮತ್ತು ಮಗು ಮೃತಪಟ್ಟಿದೆ ಎಂದು ದೂರಿನಲ್ಲಿ ದೂರಿದ್ದಾರೆ.
ಜೂ.13 ರಂದು ರಾತ್ರಿ 11 ಗಂಟೆಗೆ ನನ್ನ ಹೆಂಡತಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ನರ್ಸ್ ಗಂಗೂಬಾಯಿ ಅವರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬೆಳಿಗ್ಗೆ ಹೆರಿಗೆ ಆಗುತ್ತೆ ಎಂದು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ. ಆದರೆ, ಹೆರಿಗೆಯಾದ ಬಳಿಕ ಮಗು ಮೃತಪಟ್ಟಿದೆ. ಜೊತೆಗೆ ತಾಯಿಗೆ ತೀವ್ರ ರಕ್ತಸ್ರಾವ ಉಂಟಾಗಿ ಕೋಮಾಸ್ಥಿತಿಗೆ ತಲುಪಿ ಕೈಮೀರಿ ಹೋದಾಗ ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಂದು ಕಳಿಸಿದ್ದಾರೆ. ಆದರೆ ಕಲಬುರಗಿಗೆ ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ನನ್ನ ಹೆಂಡತಿ ಮತ್ತು ಮಗುವಿನ ಸಾವಿಗೆ ನರ್ಸ್ ಗಂಗೂಬಾಯಿ ಕಾರಣವಾಗಿದ್ದು ತಕ್ಷಣ ಬಂಧಿಸಬೇಕು' ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ: ಸುದ್ದಿ ತಡವಾಗಿ ಬೆಳಕಿಗೆ ಬಂದರೂ ವಿಷಯ ಹರಡುತ್ತಿದ್ದಂತೆ, ಗುರುವಾರ ಚಿತ್ತಾಪುರ ತಾಲೂಕು ವೈದ್ಯಾಧಿಕಾರಿಗಳಾದ ಡಾ. ವೀರನಾಥ, ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆರಿಗೆ ಬಳಸುತ್ತಿದ್ದ ಔಷಧಿ ಮಾತ್ರೆ ಹಾಗೂ ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆದು, ನರ್ಸ್ ಗಂಗುಬಾಯಿಯನ್ನು ವಿಚಾರಣೆ ನಡೆಸಿದ್ದು, ಹೆರಿಗೆ ಮಾಡಿಸುವ ಕೋಣೆಗೆ ಬೀಗ ಜಡಿದ್ದಾರೆ.







