Kalaburagi | ಕಂದಾಯ ಇಲಾಖೆ ದಿನಾಚರಣೆ; ಅಧಿಕಾರಿಗಳಿಗೆ ಸನ್ಮಾನ

ಕಲಬುರಗಿ: ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ನೌಕರರ ಸಂಘದ ಆಶ್ರಯದಲ್ಲಿ ಬುಧವಾರ ನಗರದಲ್ಲಿ ಕಂದಾಯ ಇಲಾಖೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್, ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹಾಗೂ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರನ್ನು ಕಂದಾಯ ಇಲಾಖೆ ನೌಕರರು ಹಾಗೂ ವಿವಿಧ ವೃಂದದ ಅಧಿಕಾರಿಗಳು ಹೂಗುಚ್ಛ ನೀಡಿ ಸನ್ಮಾನಿಸಿ ಶುಭಾಶಯ ಕೋರಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್, ಕಂದಾಯ ಇಲಾಖೆಯು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಸ್ನೇಹಿ ಆಡಳಿತ ನೀಡುವಲ್ಲಿ ಇಲಾಖೆಯ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದು ಕಂದಾಯ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ. ನೌಕರರು ಸಮರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಕಂದಾಯ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಪಟ್ಟೇದಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಮೋತಿಲಾಲ್ ಚವ್ಹಾಣ, ಸಂಘದ ಪದಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.






