Kalaburagi | 20 ವರ್ಷ ಅಭಿವೃದ್ಧಿ ಕಾರ್ಯವೇ ಮಾಡದ ರೇವೂರ ಕುಟುಂಬ : ಕಾಂಗ್ರೆಸ್ ಮುಖಂಡರ ಆರೋಪ

ಕಲಬುರಗಿ: ಕಳೆದ 20 ವರ್ಷಗಳಿಂದ ದಕ್ಷಿಣ ಮತಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಅವರ ಕುಟುಂಬದವರು ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಅಭಿವೃದ್ಧಿ ಮತ್ತು ಜನಪರ ಕೆಲಸಗಳಲ್ಲಿ ತೊಡಗಿರುವ ಶಾಸಕ ಅಲ್ಲಮಪ್ರಭು ಪಾಟೀಲ ವಿರುದ್ಧ ನಡೆಸಲಾಗುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹುಲಿಗೆಪ್ಪ ಕನಕಗಿರಿ, ಲಾಲ್ ಅಹ್ಮದ್ ಹಾಗೂ ಮಹಾನಗರ ಪಾಲಿಕೆಯ ಮಹಾಪೌರ ವರ್ಷಾ ಜಾನೆ ಮಾತನಾಡಿದರು.
ದಕ್ಷಿಣ ಮತಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಿಜೆಪಿ ಪ್ರತಿನಿಧಿಸುತ್ತಿರುವ ರೇವೂರ ಕುಟುಂಬ ಅಭಿವೃದ್ಧಿ ವಿಚಾರಗಳನ್ನು ಕಡೆಗಣಿಸಿ, ಭಾವನಾತ್ಮಕ ಹಾಗೂ ಧರ್ಮ ಆಧಾರಿತ ರಾಜಕಾರಣದ ಮೂಲಕ ಜನರ ವಿಶ್ವಾಸ ಗಳಿಸಿಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿಗೆ ಆಸಕ್ತಿ ಇರಲಿಲ್ಲ ಎಂದು ಅವರು ಟೀಕಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪಿಎಸ್ಐ ನೇಮಕಾತಿ ಹಗರಣ, ಬೆಲೆ ಏರಿಕೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳ ವಿರುದ್ಧ ಬಿಜೆಪಿ ನಾಯಕರು ಯಾವುದೇ ಹೋರಾಟ ನಡೆಸಿಲ್ಲ. ಆದರೆ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಹಗಲಿರುಳು ಜನರ ಸೇವೆಯಲ್ಲಿ ತೊಡಗಿಕೊಂಡು, ಕೇವಲ ಮೂರು ವರ್ಷಗಳಲ್ಲಿ ಸುಮಾರು ₹700 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಬಿಜೆಪಿ ಪ್ರತಿಭಟನೆಗಳ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಕ್ಷೇತ್ರದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ ಬದ್ಧವಾಗಿದ್ದು, ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಸಂತೋಷ್ ಧನ್ನೂರ, ಪ್ರಶಾಂತ್ ಕೋರಳ್ಳಿ, ದಶರಥ ಒಂಟಿ, ವಾಣಿಶ್ರೀ ಸಗರಕರ, ರೇಣುಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






