ಕಲಬುರಗಿ | ಅತಿವೃಷ್ಟಿಯ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ರೈತ ಪರ ಸಂಘಟನೆಗಳಿಂದ ದುಂಡು ಮೇಜಿನ ಸಭೆ

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಠಿ, ನೆರೆಹಾವಳಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಮುಂದಿನ ಹೋರಾಟದ ಕುರಿತು ವಿವಿಧ ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಗರದ ಕನ್ನಡ ಭವನದಲ್ಲಿ ದುಂಡು ಮೇಜಿನ ಸಭೆ ನಡೆಸಲಾಯಿತು.
ಕಬ್ಬು ಬೆಳೆಗಾರರಿಗೆ ಎಫ್ಆರ್ ಪಿ ಪ್ರಕಾರ ಬೆಲೆ ನಿಗದಿಪಡಿಸಬೇಕು, ಸರ್ಕಾರದ ಮಾರ್ಗ ಸೂಚಿಗಳು ಪಾಲನೆ ಮಾಡದೆ ಉಲ್ಲಂಘನೆ ಮಾಡಿ ದರ್ಪ ತೋರುವ ಸಕ್ಕೆರೆ ಕಾರ್ಖಾನೆಗಳ ವಿರುದ್ದ ಕ್ರಿಮಿನಲ್ ಮೋಕದ್ದಮೆ ದಾಖಲು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ನಿರ್ಧರಿಸಲಾಯಿತು.
ಅಲ್ಲದೆ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಬುಧವಾರ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಖಂಡ ಸುನಿಲ್ ಮಾನಪಡೆ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಮುಂದಿನ ಚಳುವಳಿ ಬಲಪಡಿಸುವ ಕುರಿತು ಶೌಕತ್ ಅಲಿ ಆಲೂರು ಮಾತನಾಡಿದರು. ಸಭೆಯ ಅಧ್ಯಕ್ಷತೆ ಶಾಂತಪ್ಪ ಪಾಟೀಲ ಸಣ್ಣೂರು ವಹಿಸಿದರು.
ಹಿರಿಯ ರೈತ ಉಮಾಪತಿ ಪಾಟೀಲ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸೋಮಣ್ಣಗೌಡ ಪಾಟೀಲ, ರಾಜ್ಯ ರೈತ ಸಂಘದ ಮಾನಪ್ಪ ಪೂಜಾರಿ, ಚಿತ್ತಾಪುರ ರೈತ ಮುಖಂಡ ನಾಗಣ್ಣ ಗೌಡ ಕಂಠಿ, ಶಹಾಬಾದ್ ರೈತ ಮುಖಂಡ ಶಿವಾಜಿ ರೂಪನೂರ, ರೈತ ಮುಖಂಡ ವಿಠ್ಠಲ ಪೂಜಾರಿ, ರೈತ ಕಾರ್ಮಿಕ ಸಂಘದ ಸೋಮಶೇಖರ್ ಸಿಂಗೆ, ಕಾರ್ಮಿಕ ಸಂಘದ ಮೈಲಾರಿ ದೊಡ್ಡಮನಿ, ಮೈಬೂಬ್ ಪಟೇಲ ಕಾಚುರ, ಶಹಾಬುದ್ದಿನ್ ಪಟೇಲ್, ಗಣೇಶ ಜಾಗೀರದಾರ್, ವೆಂಕಟೇಶ ಅಂಬಲಗಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







