ರೌಡಿಶೀಟರ್ ಚೇತನ್ ಕಲಬುರಗಿಯಿಂದ ತುಮಕೂರಿಗೆ ಗಡಿಪಾರು

ಚೇತನ್ ಚಂದ್ರಕಾಂತ
ಕಲಬುರಗಿ :ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಚೇತನ್ ಚಂದ್ರಕಾಂತ ಹೈಬತ್ತಿ(30) ಎಂಬಾತನನ್ನು ಕಲಬುರಗಿಯಿಂದ ತುಮಕೂರು ಟೌನ್ ಪೊಲೀಸ್ ಠಾಣೆಗೆ ಗಡಿಪಾರು ಮಾಡಿರುವ ಬಗ್ಗೆ ವರದಿಯಾಗಿದೆ.
ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿಶೀಟರ್ ಚೇತನ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಸಬ್-ಅರ್ಬನ್ ಮತ್ತು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ಮತ್ತು ವಡಗೇರಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತವೆ. 2016ರಿಂದ 2025ನೇ ಸಾಲಿನವರೆಗೆ ಭಾರತೀಯ ದಂಡ ಸಂಹಿತೆ ಭಾರತೀಯ ಆಯುಧ ಕಾಯ್ದೆ ಸೇರಿದಂತೆ 8 ಪ್ರಕರಣಗಳು, ಬಿ.ಎನ್.ಎಸ್. ಕಾಯ್ದೆ-2023ರಲ್ಲಿ 2 ಪ್ರಕರಣಗಳು ಮತ್ತು ಭಾರತೀಯ ದಂಡ ಪ್ರಕ್ರಿಯೆ ಅಡಿಯಲ್ಲಿ 4 ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಪ್ರಮುಖ ಆರೋಪಿತನಾಗಿರುತ್ತಾನೆ. ರೂಢಿಗತ ಆರೋಪಿ ಆಗಿರುವುದರಿಂದ ಆತನ ವಿರುದ್ಧ ‘ಎ’ ರೌಡಿಶೀಟರ್ ತೆರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟನೆೆ ತಿಳಿಸಿದೆ.
ಆರೋಪಿತನ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕಲು ಕಾನೂನಿನ ಬಗ್ಗೆ ಸೂಕ್ತ ಗೌರವ ಹೊಂದುವಂತೆ ಮನವರಿಕೆ ಮಾಡಿಕೊಡಲು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು, ಸಮಾಜ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಸದರಿ ಆರೋಪಿತನನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವಾಗಿದ್ದು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.