Kalaburagi | ರೌಡಿ ಶೀಟರ್ ಗಜಾನನ ದೇಶಪಾಂಡೆ ಗಡಿಪಾರು

ರೌಡಿ ಶೀಟರ್ ಗಜಾನನ ದೇಶಪಾಂಡೆ
ಕಲಬುರಗಿ: ವಿವಿಧ ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಫರಹತಾಬಾದ ಪೊಲೀಸ್ ಠಾಣೆಯ ‘ಬಿ’ ರೌಡಿ ಶೀಟರ್ ಗಜಾನನ ದೇಶಪಾಂಡೆ (37) ಯನ್ನು ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಲಬುರಗಿ ನಗರದ ಕರುಣೆಶ್ವರ ನಗರ, ರಾಮ ಮಂದಿರದ ಸಮೀಪದ ನಿವಾಸಿಯಾಗಿರುವ ಗಜಾನನ ದೇಶಪಾಂಡೆ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ. ಗಜಾನನ ವಿರುದ್ಧ ಕಲಬುರಗಿ ನಗರ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಕಲಂಗಳಡಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. 2013ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ನಾಲ್ಕು, ಭಾರತೀಯ ನ್ಯಾಯ ಸಂಹಿತೆ–2023 (BNS) ಅಡಿಯಲ್ಲಿ ಒಂದು ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಜಾನನ ದೇಶಪಾಂಡೆ ವಿರುದ್ಧ ದರೋಡೆ, ಕೊಲೆ, ಕೊಲೆಗೆ ಪ್ರಯತ್ನ, ಮಾರಣಾಂತಿಕ ಆಯುಧಗಳಿಂದ ಗಲಭೆ, ನ್ಯಾಯಾಲಯದ ಬಾಂಡ್ ಮೇಲೆ ಬಿಡುಗಡೆಯಾದ ಬಳಿಕ ಹಾಜರಾಗದಿರುವುದು, ದರೋಡೆ ಉದ್ದೇಶದಿಂದ ಅಕ್ರಮ ಕೂಟ ರಚನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಆಯುಧಗಳಿಂದ ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳಿವೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿತನ ನಿರಂತರ ಕಾನೂನುಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಫರಹತಾಬಾದ ಪೊಲೀಸ್ ಠಾಣೆಯ ಪಿಐ ಹುಸೇನ್ ಭಾಷಾ ಅವರು ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಗಜಾನನ ದೇಶಪಾಂಡೆಯನ್ನು ಗಡಿಪಾರು ಮಾಡುವಂತೆ ವರದಿ ಸಲ್ಲಿಸಿದ್ದರು.
ವರದಿಯ ಆಧಾರದ ಮೇಲೆ ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತರು (ಕಾ. ಮತ್ತು ಸು.) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆ ಬಳಿಕ ಗಜಾನನ ದೇಶಪಾಂಡೆ ಅವರನ್ನು ಒಂದು ವರ್ಷದ ಅವಧಿಗೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.
ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ:
ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ನಿರ್ದೇಶನದಂತೆ ರೌಡಿ ಶೀಟರ್ಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಸಾರ್ವಜನಿಕರಲ್ಲಿ ಸುರಕ್ಷತೆ ಹಾಗೂ ನೆಮ್ಮದಿಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






