Kalaburagi | ರೌಡಿ ಶೀಟರ್ ಹಡ್ಡಿ ಪಿಂಟ್ಯಾ (ನಿತೀನಕುಮಾರ) ಗಡಿಪಾರು

ಕಲಬುರಗಿ: ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರೂಢಿಗತ ರೌಡಿ ಶೀಟರ್ ನಿತೀನಕುಮಾರ ಅಲಿಯಾಸ್ ಹಡ್ಡಿ ಪಿಂಟ್ಯಾ (32) ಎಂಬಾತನನ್ನು ಒಂದು ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಯ ಕೌಲಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಕುವೆಂಪು ನಗರದ ನಿವಾಸಿಯಾಗಿರುವ ನಿತೀನಕುಮಾರ ದೇವಿದಾಸ್ ಸೂರ್ಯವಂಶಿ ವಿರುದ್ಧ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿವೆ. 2012ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ), ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023 ಹಾಗೂ ಇತರ ಕಾನೂನುಗಳ ವಿವಿಧ ಕಲಂಗಳಡಿ ಪ್ರಕರಣಗಳು ದಾಖಲಾಗಿದ್ದು, ಆತ ರೂಢಿಗತ ಅಪರಾಧಿಯಾಗಿ ಗುರುತಿಸಿಕೊಂಡಿದ್ದಾನೆ.
ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ, ಅಪಾಯಕಾರಿ ಆಯುಧಗಳಿಂದ ಹಲ್ಲೆ, ಜೀವ ಬೆದರಿಕೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಆತ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. ಅವರ ನಿರ್ದೇಶನದ ಮೇರೆಗೆ, ಆರೋಪಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಹಾಗೂ ಸಾರ್ವಜನಿಕ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಗಡಿಪಾರು ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಎಂ. ಪಾಟೀಲ್ ಅವರು ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55ರ ಅಡಿಯಲ್ಲಿ ಗಡಿಪಾರು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರು.
ವರದಿಯ ಪರಿಶೀಲನೆ ಹಾಗೂ ವಿಶೇಷ ವಿಚಾರಣೆ ನಡೆಸಿದ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಶ್ರೀಮತಿ ಶಾಲೂ ಐಪಿಎಸ್ ಅವರು, ನಿತೀನಕುಮಾರ @ ಹಡ್ಡಿ ಪಿಂಟ್ಯಾನನ್ನು ಒಂದು ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಯ ಕೌಲಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.






