ಕಲಬುರಗಿ | ಕಟ್ಟಿಗೆಯಿಂದ ಹೊಡೆದು ರೌಡಿ ಶೀಟರ್ ಸುಧಾಕರ್ ಹತ್ಯೆ

ಸುಧಾಕರ್
ಕಲಬುರಗಿ: ರೌಡಿ ಶೀಟರ್ ಒಬ್ಬನನ್ನು ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಆಳಂದ ತಾಲ್ಲೂಕಿನ ಸಾವಳೇಶ್ವರ ಕ್ರಾಸ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಧುತ್ತರಗಾಂವ್ ಗ್ರಾಮದ ಸುಧಾಕರ್ (32) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಂಗಳವಾರ ತಡರಾತ್ರಿ ಸಹೋದರನ ಜೊತೆ ಬೈಕ್ ಮೇಲೆ ತೆರಳುವಾಗ ದುಷ್ಕರ್ಮಿಗಳು ದಾಳಿ ನಡೆಸಿ, ಕಟ್ಟಿಗೆ, ತಾಂಬೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಸುಧಾಕರನ ಸಹೋದರ ಸಿದ್ಧರಾಮನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದನ ಹಿಪ್ಪರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ಡಾಬಾದಲ್ಲಿ ಕುಡಿದು ಇಬ್ಬರು ಸಹೋದರರು ಗಲಾಟೆ ನಡೆಸಿ, ಅಲ್ಲಿನ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾರೆ. ಇಬ್ಬರೂ ಸಾವಳೇಶ್ವರ್ ಸಮೀಪದ ಡಾಬಾದಲ್ಲಿ ಇರೋದನ್ನು ಗಮನಿಸಿದ ಮಾದನ ಹಿಪ್ಪರ್ಗಾ ಮೂಲದ ಡಾಬಾದ ಜನರು ಕಟ್ಟಿಗೆಗಳಿಂದ ಹೊಡೆದು ತೀವ್ರ ಗಾಯಗೊಳಿಸಿದ್ದಾರೆ. ಗಂಭೀರ ಗಾಯಗೊಂಡು ಸುಧಾಕರ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಸಹೋದರ ಸಿದ್ಧರಾಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಗೆ ಯತ್ನ, ರೇಪ್ ಕೇಸ್, ಕಳ್ಳತನ, ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡ್ಡಿಸುವುದು ಸೇರಿದಂತೆ ಸುಧಾಕರ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ನಿಂಬರ್ಗಾ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಓಪನ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಊಟಕ್ಕೆಂದು ಮಾದನ ಹಿಪ್ಪರ್ಗಾದಲ್ಲಿ ಧಾಬಾವೊಂದರಲ್ಲಿ ಹೋಗಿ ಗಲಾಟೆ ಮಾಡಿದ್ದಾರೆ. ಅದೇ ಗಲಾಟೆಯಲ್ಲಿ ಸುಧಾಕರ್ ಕೊಲೆಯಾಗಿದೆ. ಪೊಲೀಸರು ಆರೋಪಿಗಳ ಬಲೆ ಬೀಸಲು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಆಳಂದ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಕೊಡ್ಲಾ ತಿಳಿಸಿದ್ದಾರೆ.