Kalaburagi | ಶೋಷಿತ ಸಮುದಾಯದ ಅಭ್ಯುದಯಕ್ಕೆ 1.96 ಲಕ್ಷ ಕೋಟಿ ರೂ. ಮೀಸಲು: ರಾಮದಾಸ್ ಅಠವಳೆ

ಕಲಬುರಗಿ: ಪ್ರಸಕ್ತ 2026-27ನೇ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಗಳ ಕಲ್ಯಾಣಕ್ಕೆ ಸುಮಾರು 1,96,400.37 ಕೋಟಿ ರೂ. ಹಣ ಮೀಸಲಿಟ್ಟಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಹೇಳಿದರು.
ಮಂಗಳವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಹೋಲಿಕೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ 35,195.27 ಕೋಟಿ ರೂ. ಹೆಚ್ಚಳ ಮಾಡಲಾಗಿದೆ. ಇದು ತಳ ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದರು.
ದಲಿತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ಅವಾಸ್ ಯೋಜನೆ, ಮುದ್ರಾ ಯೋಜನೆ, ಜನಧನ ಯೋಜನೆ ಹಾಗೂ ಸ್ವಚ್ಛ ಭಾರತ ಮಿಷನ್ ಸೇರಿದಂತೆ ಹಲವು ಸಮಾಜಮುಖಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ತಮ್ಮ ಸಚಿವಾಲಯವು ಎಸ್‌ಸಿ ಸಮುದಾಯದ ಜೊತೆಗೆ ಓಬಿಸಿ, ವಿಶೇಷಚೇತನರು, ಹಿರಿಯ ನಾಗರಿಕರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಶ್ರಮಿಸುತ್ತಿದೆ ಎಂದು ಹೇಳಿದರು.
ಆದರ್ಶ ಗ್ರಾಮ ಯೋಜನೆಯಡಿ 2021-22ರಿಂದ 2025-26ರವರೆಗೆ 85 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಸೇರಿದಂತೆ 205 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 65 ಗ್ರಾಮಗಳನ್ನು ಆದರ್ಶ ಗ್ರಾಮಗಳೆಂದು ಘೋಷಿಸಲಾಗಿದೆ. 2025-26ರಲ್ಲಿ ಮತ್ತಷ್ಟು 20 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಡಿಪಿಆರ್ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
2021-22ರಿಂದ 2025-26ರವರೆಗೆ ಕಲಬುರಗಿ ಜಿಲ್ಲೆಗೆ ಒಟ್ಟು ₹7.68 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಸಂಪೂರ್ಣ ಹಣವನ್ನು ಬಳಸಲಾಗಿದೆ ಎಂದು ಸಚಿವರು ತಿಳಿಸಿದರು.
“ಸಬ್ಕಾ ಸಾಥ್, ಸಬ್ಕಾ ವಿಕಾಸ್” ಘೋಷವಾಕ್ಯದೊಂದಿಗೆ ಕೇಂದ್ರ ಸರ್ಕಾರವು ಸರ್ವಜನರ ಹಿತ ಕಾಪಾಡುವ ಕೆಲಸ ಮಾಡುತ್ತಿದೆ. ಸಮಾಜ ಸುಧಾರಕ ಕಾಕಾ ಕಾಳೆಸ್ಕರ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಓಬಿಸಿ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಶಿಫಾರಸು ಮಾಡಿತ್ತು. ಬಳಿಕ ಮಂಡಲ್ ಆಯೋಗದ ವರದಿಯ ಪರಿಣಾಮವಾಗಿ ಶೇ.27ರಷ್ಟು ಮೀಸಲಾತಿ ದೊರಕಿತು ಎಂದು ಹೇಳಿದರು.
ಅಲ್ಲದೆ ಬಿ. ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಕಲ್ಪಿಸಿದ ಹಕ್ಕುಗಳಿಂದ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಲಭ್ಯವಾಗಿದೆ ಎಂದ ಅವರು, ಹಿಂದುಳಿದ ವರ್ಗಗಳಿಗೆ ನ್ಯಾಯ ಕಲ್ಪಿಸುವ ಉದ್ದೇಶದಿಂದ ದೇಶಾದ್ಯಂತ ಜಾತಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಕಲಬುರಗಿ ದಲಿತ ಜಾಗೃತಿಯ ನೆಲವಾಗಿದ್ದು, ಅಂಬೇಡ್ಕರ್ ಚಳುವಳಿ ಹಾಗೂ ದಲಿತ ಹೋರಾಟಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ಬಸವಣ್ಣ ಅವರ ಸಮಾನತೆಯ ಸಂದೇಶ ನೀಡಿದ ಭೂಮಿಯಲ್ಲಿ ಇದೇ ಮೊದಲ ಬಾರಿಗೆ ಬುದ್ಧ-ಬಸವ-ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವುದಾಗಿ ಹೇಳಿದರು.
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಿಂದ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಾಗುತ್ತಿದೆ. ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿರುವ ಈ ಸಮಸ್ಯೆಯನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ. ಪಕ್ಷದ ರಾಷ್ಟ್ರೀಯ ಕಾರ್ಯಧ್ಯಕ್ಷ ವೆಂಕಟಸ್ಚಾಮಿ, ಉಪಾಧ್ಯಕ್ಷ ಕಾಕಾಸಾಹೇಬ್ ಕಂಬಾಳಕರ್, ಮಹಾರಾಷ್ಟ್ರದ ಅಧ್ಯಕ್ಷ ರಾಜಾ ಸರ್ವದೆ, ಮುಂಬೈ ಪ್ರದೇಶದ ಜನರಲ್ ಸೆಕ್ರೆಟರಿ ವಿವೇಕ ಪವಾರ, ದಕ್ಷಿಣ ಭಾರತದ ಜನರಲ್ ಸೆಕ್ರೆಟರಿ ಎ.ಬಿ.ಹೊಸಮನಿ, ಮುಖಂಡರಾದ ಪ್ರಕಾಶ ಮೂಲಭಾರತಿ, ನಾಗೇಶ ತಳಕೇರಿ ಇದ್ದರು.






