Kalaburagi | ಸ್ವಚ್ಛತೆ–ರಾಷ್ಟ್ರಪ್ರೇಮದ ಸಂದೇಶ ಸಂದೇಶ ಸಾರಲು ಆ.14ರಂದು ‘ರನ್ ಫಾರ್ ಶತಾಭಿಷೇಕಂ’ ಮ್ಯಾರಥಾನ್

ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಛತೆ, ರಾಷ್ಟ್ರಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಆ.14ರಂದು ‘ರನ್ ಫಾರ್ ಶತಾಭಿಷೇಕಂ’ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಆಯೋಜಿಸಲಾಗಿದೆ.
ಆ.14ರಂದು ಬೆಳಿಗ್ಗೆ 7.30ಕ್ಕೆ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಓಟವು ಕಲಬುರಗಿ ಕೋಟೆಯಿಂದ ಆರಂಭವಾಗಿ ಜಗತ್ ವೃತ್ತದ ಮೂಲಕ ತಿಮ್ಮಾಪುರ ವೃತ್ತದವರೆಗೆ ಸಾಗಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಮನವಿ ಮಾಡಿದ್ದಾರೆ.
ಓಟದಲ್ಲಿ ಭಾಗವಹಿಸುವವರ ನೋಂದಣಿ ಬೆಳಿಗ್ಗೆ 6.30ರಿಂದ ನಡೆಯಲಿದ್ದು, ನೋಂದಾಯಿತರಿಗೆ ಕ್ಯಾಪ್ ಹಾಗೂ ಟಿ-ಶರ್ಟ್ ವಿತರಿಸಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.
ಮಕ್ಕಳಿಗೆ ಚಿತ್ರಕಲೆ, ಟಾಯ್‌ಕಥಾನ್ :
ಮ್ಯಾರಥಾನ್ ಬಳಿಕ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10ಕ್ಕೆ ‘ಸ್ವಚ್ಛ ಭಾರತ ಮತ್ತು ಸ್ವಾತಂತ್ರ್ಯ ದಿನಾಚರಣೆ’ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಬೆಳಿಗ್ಗೆ 11.30ಕ್ಕೆ ‘ಕಲಬುರಗಿಯಲ್ಲಿ ಸ್ವಚ್ಛ ಭಾರತದ ಮಾದರಿಗಳು ಹಾಗೂ ತ್ಯಾಜ್ಯ ವಸ್ತುಗಳಿಂದ ತಯಾರಿಸಿದ ಸ್ವಚ್ಛ ಭಾರತದ ಮಾದರಿಗಳು’ ವಿಷಯದ ಕುರಿತು ಆಟಿಕೆ ತಯಾರಿಕಾ ಸ್ಪರ್ಧೆ (ಟಾಯ್‌ಕಥಾನ್) ನಡೆಯಲಿದೆ.
ಮಧ್ಯಾಹ್ನ 12ಕ್ಕೆ ತ್ಯಾಜ್ಯ ವಿಂಗಡಣೆ, ಮರುಬಳಕೆ ಹಾಗೂ ಸ್ವಚ್ಛತೆ ಕುರಿತು ಸ್ವಚ್ಛ ಭಾರತ ಮಿಷನ್ ತಜ್ಞರಿಂದ ಜಾಗೃತಿ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ಸಂಜೆ 4ರವರೆಗೆ ಸಾರ್ವಜನಿಕರಿಗೆ ಕಲಾಕೃತಿಗಳ ಪ್ರದರ್ಶನ ವೀಕ್ಷಿಸಲು ಅವಕಾಶವಿದೆ.
ಸ್ವಾತಂತ್ರ್ಯದ ಮೌಲ್ಯಗಳನ್ನು ಗೌರವಿಸುವುದರ ಜತೆಗೆ ಸ್ವಚ್ಛ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಯುವಜನತೆ ಮತ್ತು ಮಕ್ಕಳನ್ನು ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.






