Kalaburagi | ಭೈರಾಮಡಗಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಚಾಲನೆ

ಕಲಬುರಗಿ: ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದ ಕೃಷಿ ಮಹಾವಿದ್ಯಾಲಯ, ಕಲಬುರಗಿಯ ಅಂತಿಮ ವರ್ಷದ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖರು ಹಾಗೂ ಪ್ರಗತಿಪರ ರೈತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಗತಿಪರ ರೈತ ಶರಣಗೌಡ ಅಣ್ಣಾರಾವ್ ಪಾಟೀಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಾತನಾಡಿದ ಅವರು, ರೈತರು ಅವೈಜ್ಞಾನಿಕ ಕೃಷಿ ಪದ್ಧತಿಗಳಿಂದ ಹೊರಬಂದು ವೈಜ್ಞಾನಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಬಿ.ಎಂ. ದೊಡ್ಡಮನಿ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ತರಗತಿಯ ಪಠ್ಯ ಜ್ಞಾನದ ಜೊತೆಗೆ ಗ್ರಾಮೀಣ ಪ್ರದೇಶದ ನೈಜ ಪರಿಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪ್ರಾಯೋಗಿಕ ಅರಿವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವು ಉತ್ತಮ ವೇದಿಕೆಯಾಗಿದೆ ಎಂದರು.
ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ರೈತರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಆಧುನಿಕ ಕೃಷಿ ತಂತ್ರಜ್ಞಾನ, ಸಸ್ಯ ಜ್ಞಾನ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ರೈತರು ಹಾಗೂ ಕೃಷಿ ವಿಜ್ಞಾನದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಶಿಬಿರದ ಸಂದರ್ಭದಲ್ಲಿ ಮಣ್ಣಿನ ಪರೀಕ್ಷೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಮಗ್ರ ಕೀಟ ಮತ್ತು ಸಸ್ಯ ರೋಗ ನಿರ್ವಹಣೆ ಹಾಗೂ ಕೃಷಿ ಆರ್ಥಿಕತೆಯ ಸುಧಾರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರೈತರೊಂದಿಗೆ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳು ಮುಂದಾಗಲಿದ್ದಾರೆ ಎಂದು ಪ್ರಾಧ್ಯಾಪಕರು ತಿಳಿಸಿದರು.
ಶಿಬಿರಾರ್ಥಿ ವಿದ್ಯಾರ್ಥಿಗಳು ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಪ್ರತಿ ಕೃಷಿ ಕುಟುಂಬದೊಂದಿಗೆ ಬೆರೆತು, ಅವರ ಕೃಷಿ ಸಮಸ್ಯೆಗಳನ್ನು ಆಲಿಸಿ, ಅಗತ್ಯಕ್ಕೆ ತಕ್ಕಂತೆ ಕೃಷಿ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಡಾ. ಸಂಜೀವ ಬೆಲ್ಲದ, ಡಾ. ಸಿದ್ಧರಾಮ ಯಾಳವಾರ ಹಾಗೂ ಡಾ. ಮಹಾಂತೇಶ ಜೋಗಿ ಅವರು ತೋಟಗಾರಿಕೆ ಬೆಳೆಗಳ ಮಹತ್ವದ ಕುರಿತು ಮಾತನಾಡಿದರು.
ಭೈರಾಮಡಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈರಣ್ಣ ಬಿರಾದಾರ, ಶಿವಾನಂದ ಪೊಲೀಸ್ ಪಾಟೀಲ್ ಸೇರಿದಂತೆ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಭಿಷೇಕ್ ಕುಲಕರ್ಣಿ ನಿರೂಪಿಸಿದರು. ಭಾಗ್ಯಲಕ್ಷ್ಮಿ ಸ್ವಾಗತಿಸಿದರು. ಡಿ. ನವೀನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾವೇರಿ ವಂದಿಸಿದರು.






