ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಸೈಬಣ್ಣಾ ಜಮಾದಾರ ಆಗ್ರಹ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಜ್ವಲಂತ ಸಮಸ್ಯೆಯಾದ 371(ಜೆ) ಕಲಂ ತಿದ್ದುಪಡಿ ಮತ್ತು ಮುಂಬಡ್ತಿ ನಿಯಮಗಳನ್ನು ಸರಿಪಡಿಸಲು ವಿಫಲರಾದ 371(ಜೆ) ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಬಣ್ಣಾ ಜಮಾದಾರ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 371(ಜೆ) ಅಡಿಯಲ್ಲಿ ಸಮರ್ಪಕವಾಗಿ ನೇಮಕವಾಗ್ತಿಲ್ಲ ಅನ್ನೋ ವಿಚಾರ ಒಂದು ಕಡೆಯಾದರೆ ಮತ್ತೊಂದೆಡೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮುಂಬಡ್ತಿ ಸಿಗದೇ ಪರದಾಟ ನಡೆಸಿದ್ದಾರೆ, ಇದರ ಕುರಿತು ಈ ಭಾಗದ ಶಾಸಕರು ಬಜೆಟ್ ಅಧಿವೇಶನದಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಶವಸಂಸ್ಕಾರ ಮಾಡುವುದರ ಮೂಲಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
371 (ಜೆ) ಕಲಂನ ಮುಂಬಡ್ತಿ ನಿಯಮಗಳ ಕಾನೂನು ತಿದ್ದುಪಡಿ ಮಾಡಬೇಕು, ಹೈದ್ರಾಬಾದ್ ಕರ್ನಾಟಕ ಹೊರೆತುಪಡಿಸಿ 24 ಜಿಲ್ಲೆಗಳಲ್ಲಿ ಶೇ.8ರಷ್ಟು ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ಒದಗಿಸಬೇಕು, ಅಬಕಾರಿ ಇಲಾಖೆಯಲ್ಲಿ ಅಕ್ರಮವಾಗಿ ನೀಡುತ್ತಿರುವ ಮುಂಬಡ್ತಿ ಸ್ಥಗಿತಗೊಳಿಸಬೇಕು, ಹೈದ್ರಾಬಾದ್ ಕರ್ನಾಟಕ ವಿಶೇಷ ಕೋಶ ಕಲಬುರಗಿ ಸ್ಥಳಾಂತರಿಸಬೇಕು, ಡಿ.ಚಂದ್ರಶೇಖರಯ್ಯ ಅವರನ್ನು 371(ಜೆ ) ಸಚಿವ ಸಂಪುಟ ಉಪ ಸಮಿತಿಯಿಂದ ಕೈ ಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಜೆಟ್ ಅಧಿವೇಶನದಲ್ಲಿ ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಜಾಧವ, ರಾಮು ಪವಾರ, ಸಂತೋಷ ಪೂಜಾರಿ, ಎಮ್.ಡಿ.ಅಮನ ಮತ್ತಿತರರು ಇದ್ದರು.







