ಕಲಬುರಗಿ | ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾ ಜಿಲ್ಲಾ ಮಟ್ಟದ ಪಾದಯಾತ್ರೆ

ಕಲಬುರಗಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅವರು ಸರ್ದಾರ್ ಪಟೇಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, “ದೇಶದ ವಿವಿಧ ಸಂಸ್ಥಾನಗಳನ್ನು ಭಾರತೀಯ ಒಕ್ಕೂಟಕ್ಕೆ ವಿಲೀನಗೊಳಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಜುನಾಗಢ ಹಾಗೂ ಹೈದರಾಬಾದ್ ಸಂಸ್ಥಾನಗಳು ಒಕ್ಕೂಟಕ್ಕೆ ಸೇರ್ಪಡೆಗೆ ಹಿಂಜರಿದಾಗ, ಅವರು ದೃಢವಾದ ಕ್ರಮಗಳಿಂದ ಅವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಿದರು,” ಎಂದು ಹೇಳಿದರು.
ಕಲಬುರಗಿ ಲೋಕಸಭಾ ಮಾಜಿ ಸದಸ್ಯ ಡಾ. ಉಮೇಶ ಜಾಧವ್ ಮಾತನಾಡಿ, “ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಏಕತಾ ದಿನವಾಗಿ ಘೋಷಿಸಿದೆ. ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಒಂದಾಗಿ ಭಾಗವಹಿಸಿ ರಾಷ್ಟ್ರದ ಏಕತೆಯನ್ನು ಬಲಪಡಿಸಬೇಕು, ಎಂದು ಹೇಳಿದರು.
ಇತಿಹಾಸ ತಜ್ಞ ಡಾ. ಎನ್.ಎಸ್. ಜಾಧವ್ ಅವರು ಸರ್ದಾರ್ ಪಟೇಲ್ ಅವರ ಅಖಂಡ ಭಾರತ ನಿರ್ಮಾಣದಲ್ಲಿ ವಹಿಸಿದ ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಮೊದಲು, ಜಗತ್ ವೃತ್ತದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಡೊಳ್ಳು ಕುಣಿತದೊಂದಿಗೆ ಪಾದಯಾತ್ರೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ತೆರಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ನಂತರ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಹಣಮಂತ ಜಂಗೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತರಬೇತಿದಾರ ಸಂಜಯ ಬಾಣದ, ಮೇರಾ ಯುವ ಭಾರತ ಜಿಲ್ಲಾ ಯುವ ಅಧಿಕಾರಿ ಮಯೂರ ಕುಮಾರ ಗೋರ್ಮೆ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಿತೀನ್ ಗತ್ತೇದಾರ, ಸಂಗಮೇಶ ವಾಲಿ, ಉಮೇಶ ಪಾಟೀಲ, ಮಹಾದೇವ ಬೆಳಮಗಿ, ಚನ್ನಬಸಪ್ಪಾ ಭಂಗೆ, ಮಹೇಶ ಚವ್ಹಾಣ, ನಾಗಪ್ಪಾ ಕೊಳ್ಳಿ, ಮಹೇಂದ್ರ ಪೂಜಾರಿ, ಸಂತೋಷ್ ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎನ್.ಎಸ್.ಎಸ್. ಅಧಿಕಾರಿ ದಯಾನಂದ ಹೊಡಲ್ ನಿರೂಪಿಸಿದರು.







