ಕಲಬುರಗಿ | ಪ್ರತ್ಯೇಕ ಪ್ರಕರಣ : ಆರು ಮಂದಿಯ ಬಂಧನ

ಕಲಬುರಗಿ: ಕಾಳಗಿ–ಕೋಡ್ಲಿ ಮಧ್ಯದ ಮುಖ್ಯರಸ್ತೆಯಲ್ಲಿ ಪೊಲೀಸರಂತೆ ನಟಿಸಿ ಗಮನ ಬೇರೆಡೆ ಸೆಳೆದು ಯುವಕನಿಂದ ಚಿನ್ನಾಭರಣ ದೋಚಿದ ಪ್ರಕರಣ ಹಾಗೂ ಮಹಿಳೆಗೆ ಫೋನ್‌ನಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದೀಯ ಎಂದು ಹೆದರಿಸಿ ಯುವಕನಿಂದ ಚಿನ್ನಾಭರಣ ಕಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬೀದರ್ ನಗರದ ಇರಾನಿಗಲ್ಲಿಯ ಮುಹಮ್ಮದ್ ಅಲಿ, ಗುಲಾಂ ಅಬ್ಬಾಸ್ ಇವರಿಂದ 36 ಸಾವಿರ ರೂ. ಮೌಲ್ಯದ ಐದು ಗ್ರಾಂ ಬಂಗಾರದ ಚೈನ್ ಜಪ್ತಿ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮಂಗಲಗಿಯ ಮುಹಮ್ಮದ್ ಮುಸ್ತಫಾ, ಕಲಬುರಗಿಯ ಮುಹಮ್ಮದ್ ಹಾರೀಶ್, ನಿಜಾಮೋದ್ದೀನ್ ಪಟೇಲ್ ಮತ್ತು ಸೈಯದ್ ಇಬ್ರಾಹಿಂ ಬಂಧಿತರಾಗಿದ್ದು, ಅವರಿಂದ 25 ಗ್ರಾಂ ಬಂಗಾರದ ಆಭರಣ, ಒಂದು ಸ್ಕಾರ್ಪಿಯೋ ಜೀಪ್ ಮತ್ತು ಹನ್ನೊಂದು ಸಾವಿರ ರೂ. ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ಪತ್ತೆಗೆ ಅಪರ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣ, ಶಹಾಬಾದ್ ಡಿ.ಎಸ್.ಪಿ ಶಂಕರಗೌಡ ಪಾಟೀಲ, ಸಿಪಿಐ ಜಗದೇವಪ್ಪ ಪಾಳಾ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ತಿಮಯ್ಯ ಬಿ.ಕೆ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಮಂಜುನಾಥ, ಚಂದ್ರಕಾಂತ, ಸಂಗಮೇಶ, ಮೌನೇಶ, ಅಂಬರೀಷ, ಮಾರುತಿ, ಮಂಜುನಾಥ ಮತ್ತು ಶಿವರಾಜ ಸೇರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳ ಪತ್ತೆಯಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಎಸ್‌ಪಿ ಅಡ್ಡೂರು ಶ್ರೀನಿವಾಸಲು ಶ್ಲಾಘಿಸಿದ್ದಾರೆ.







