ಕಲಬುರಗಿ | ಮನೆಗಳ್ಳತನ, ದರೋಡೆ ಪ್ರಕರಣ; ಐವರು ಆರೋಪಿಗಳ ಬಂಧನ : ಡಾ.ಶರಣಪ್ಪ ಎಸ್.ಡಿ.

ಬಂಧಿತ ಆರೋಪಿಗಳು
ಕಲಬುರಗಿ: ಮನೆಗಳ್ಳತನ ಹಾಗೂ ಅಪಹರಿಸಿ ದರೋಡೆ ಮಾಡಿರುವ ಪ್ರತ್ಯೇಕ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ನಗದು ಮತ್ತು ಬಂಗಾರವನ್ನು ವಶಕ್ಕೆ ಪಡೆಯುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ವ್ಯಾಪ್ತಿಯ ವಿವಿಧ 7 ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಹೈದರಾಬಾದ್ ನಗರದ ಫೂಲ್ ಭಾಗ ಅಹ್ಮದ್ ಕಾಲೋನಿಯ ನಿವಾಸಿ ಸೈಯದ್ ಹಮೀದ್ (47) ಎಂಬವರನ್ನು ಬಂಧಿಸಿ, 11 ಲಕ್ಷ ರೂ. ಮೌಲ್ಯದ 123 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಿಕ್ಷಕರೊಬ್ಬರನ್ನು ಅಪಹರಿಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರಾಗೃಹ ಸಮೀಪದ ನಿವಾಸಿ ಅನಿಲ್ ಕುಮಾರ್ ಹಡಪದ, ತಾಡತೆಗನೂರದ ನಿವಾಸಿ ಸುಭಾಷ್ ತೆಗನೂರ, ಸೀತನೂರಿನ ಸಂತೋಷ್ ದೇವರಮನೆ ಹಾಗೂ ತಾಡತೆಗನೂರದ ಮಹೇಶ್ ಬಡಿಗೇರ್ ರನ್ನು ಬಂಧಿಸಿ, 1 ಲಕ್ಷದ 41 ಸಾವಿರ ರೂ. ಮೌಲ್ಯದ ಒಂದು ಮೊಬೈಲ್, ಬಂಗಾರದ ಉಂಗುರು, ಮೋಟಾರ್ ಸೈಕಲ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮನೆಗಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಎರಡು ತನಿಖಾ ತಂಡಗಳ ಅಧಿಕಾರಿ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ, ಶ್ಲಾಘನೆ ವ್ಯಕ್ತಪಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.







