ಕಲಬುರಗಿ | ಪ್ರತ್ಯೇಕ ಕಳ್ಳತನ ಪ್ರಕರಣ; ಐವರ ಬಂಧನ : ಎಸ್ಪಿ ಅಡ್ಡೂರು ಶ್ರೀನಿವಾಸಲು
ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆಗೆ ಎಸ್ಪಿ ಮೆಚ್ಚುಗೆ

ಕಲಬುರಗಿ: ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ ಕಳ್ಳತನವಾಗಿದ್ದ ಒಟ್ಟು 19.33 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಂದೋಲಾ ನಿವಾಸಿ ಕರುಣಸಾಗರ್ ಗಡೆದ್ ನೀಡಿದ ದೂರಿನ ಮೇರೆಗೆ ಪ್ರಕರಣ ಬೆನ್ನಟ್ಟಿ ಜೇವರ್ಗಿ ತಾಲ್ಲೂಕಿನ ಕಟ್ಟಿ ಸಂಗಾವಿ ನಿವಾಸಿ ರೇಣುಕಾ ಶರಣಬಸಪ್ಪ ಗುಳೇದ್(39) ಎಂಬಾಕೆಯನ್ನು ಬಂಧಿಸಲಾಗಿದೆ, ನರೋಣಾ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರತ್ಯೇಕ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಸೂರ್ ನಾಯಕ್ ತಾಂಡಾ ನಿವಾಸಿ ಶಿವಾನಂದ್ ಕಾಳೆ(22) ಮತ್ತು ಸಿದ್ಧರಾಮ ಗಿರಿಮಲ್ಲ ಬಾಳಿ(24), ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಪಡಸಾವಳಗಿ ಗ್ರಾಮದ ನಿವಾಸಿ ಬಸವರಾಜ್ ತುಕಾರಾಂ ಘೊಡಕೆ ಹಾಗೂ ಕಾಳಗಿ ಠಾಣೆಯ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಶೇರ್ ಅಲಿ ಎಂಬಾತನನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ಆರೋಪಿ ಕೈಲಾಸ್ ನನ್ನು ಪತ್ತೆ ಹಚ್ಚಿ ಕಳವಾದ ಹಣ ಜಪ್ತಿ ಮಾಡಿಕೊಳ್ಳಲಾಗುವುದು ಎಂದರು.
ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಲು ಅಪರ ಪೊಲೀಸ್ ಅಧಿಕಾರಿ ಮಹೇಶ್ ಮೇಘನ್ನನವರ್ ನೇತೃತ್ವದಲ್ಲಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. ದಾಖಲಾದ ಎಲ್ಲಾ ಕಳ್ಳತನ ಪ್ರಕರಣಗಳನ್ನೂ ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘನ್ನನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಆಳಂದ ಪಿಐ ಶರಣಬಸಪ್ಪ ಕೊಡ್ಲಾ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.







