Kalaburagi | ʼಲಿಂಗ ಪತ್ತೆ ಹಚ್ಚುವುದು ಕಾನೂನುಬಾಹಿರ, ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮʼ

ಡಾ. ಶರಣಬಸಪ್ಪ ಕ್ಯಾತನಾಳ
ಕಲಬುರಗಿ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಹಾಗೂ ಲಿಂಗಾನುಪಾತ ಸುಧಾರಣೆಗೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗುವುದು ಅಥವಾ ಅಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಶಿಕ್ಷಾರ್ಹ ಅಪರಾಧ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಲಿಂಗ ನಿರ್ಣಯ ಹಾಗೂ ಲಿಂಗ ಆಯ್ಕೆ ಪದ್ಧತಿಗಳನ್ನು ನಿಷೇಧಿಸುವ ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (ಪಿ.ಸಿ.ಪಿ.ಎನ್.ಡಿ.ಟಿ) ಕಾಯ್ದೆ-1994 ಅನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾಯ್ದೆ ಉಲ್ಲಂಘಿಸಿ ಲಿಂಗ ಪತ್ತೆ ಮಾಡುವ ಆಸ್ಪತ್ರೆಗಳು, ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ಜೈಲು ಶಿಕ್ಷೆ, ದಂಡ ಹಾಗೂ ವೈದ್ಯಕೀಯ ಪರವಾನಗಿ ರದ್ದುಪಡಿಸುವಂತಹ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾಗರಿಕರು ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಹಾಗೂ ಬೆಂಬಲಿಸಬಾರದು. ಲಿಂಗ ಪತ್ತೆ ಮಾಡುವ ಕೇಂದ್ರಗಳು ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಖಚಿತ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ವಿಶ್ವಾಸಾರ್ಹ ಮಾಹಿತಿ ನೀಡುವ ಮಾಹಿತಿದಾರರಿಗೆ ಬಹುಮಾನ ನೀಡಲಾಗುವುದು ಹಾಗೂ ಅವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
“ಅವಳನ್ನು ಬದುಕಲು ಬಿಡಿ, ಸಮಾಜವನ್ನು ಅಭಿವೃದ್ಧಿ ಹೊಂದಲು ಬಿಡಿ” ಎಂಬ ಘೋಷವಾಕ್ಯದಡಿ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ರೋಗನಿರ್ಣಯ ಕೇಂದ್ರಗಳ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಲಿಂಗ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸಾಮಾಜಿಕ ಜಾಗೃತಿ ಮೂಡಿಸಬೇಕೆಂದು ಇಲಾಖೆಯು ಕರೆ ನೀಡಿದೆ.






