ಕಲಬುರಗಿ: ಎಸ್‌ಎಫ್‌ಐ 17ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಕಲಬುರಗಿ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಗರದ ಜಗತ್ ವೃತ್ತದಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಿರಿಯ ಸಾಹಿತಿಗಳು, ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಎಸ್‌ಎಫ್‌ಐ ಪದಾಧಿಕಾರಿಗಳು ಒಟ್ಟಾಗಿ ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಅರ್ಜುನ್ ಭದ್ರೆ ಮಾತನಾಡಿ, “ಈ ಸಮ್ಮೇಳನವು ವಿದ್ಯಾರ್ಥಿಗಳ ಹಕ್ಕುಗಳನ್ನು ಎತ್ತಿಹಿಡಿಯುವುದರ ಜೊತೆಗೆ ನಾಡಿನ ಸೌಹಾರ್ದತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಕಲಬುರಗಿ ಜಿಲ್ಲೆಯ ಜನತೆ ಈ ಸಮ್ಮೇಳನವನ್ನು ನಮ್ಮ ವಿದ್ಯಾರ್ಥಿಗಳ ಸಮ್ಮೇಳನವೆಂದು ಭಾವಿಸಿ, ಅಗತ್ಯ ಸಹಾಯ, ಸಹಕಾರ ಹಾಗೂ ಸಲಹೆಗಳನ್ನು ನೀಡುವ ಮೂಲಕ ಯಶಸ್ವಿಗೊಳಿಸಬೇಕು. ಇದು ದಾಸೋಹದ ನಾಡಾಗಿದ್ದು, ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಮರಿಯಪ್ಪ ಹಳ್ಳಿ ಮಾತನಾಡಿ, “ಎಸ್‌ಎಫ್‌ಐನ ರಾಜ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಮೂರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಚರ್ಚಿಸಲಿದ್ದಾರೆ. ಈ ಸಮ್ಮೇಳನವನ್ನು ಜಿಲ್ಲೆಯ ಜನರೆಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸುವುದು ನಮ್ಮೆಲ್ಲರ ಪ್ರಗತಿಪರ ಕರ್ತವ್ಯವಾಗಿದೆ. ಅಕ್ಟೋಬರ್ 30ರಂದು ನಡೆಯಲಿರುವ ಬಹಿರಂಗ ಸಭೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, “ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವುದು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸುವುದು, ಕೋಮು ಸೌಹಾರ್ದತೆಯನ್ನು ಕಾಪಾಡುವುದು ಹಾಗೂ ಸಂವಿಧಾನದ 371(ಜೆ) ಕಲಂ ಅನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐನ 17ನೇ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಸಮ್ಮೇಳನವು ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿರುವ ಕೆಪಿಟಿಸಿಎಲ್ ಭವನದಲ್ಲಿ ಅಕ್ಟೋಬರ್ 30, 31 ಹಾಗೂ ನವೆಂಬರ್ 1ರಂದು ನಡೆಯಲಿದೆ. ಅಕ್ಟೋಬರ್ 30ರಂದು ಬೆಳಿಗ್ಗೆ 10:30ಕ್ಕೆ ತಿಮ್ಮಾಪುರ ವೃತ್ತದಿಂದ ಜಗತ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದ್ದು, ನಂತರ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ಜರುಗಲಿದೆ.
ಬಹಿರಂಗ ಸಭೆಯನ್ನು ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ ಎಂ.ಸಾಜಿ ಉದ್ಘಾಟಿಸಲಿದ್ದಾರೆ. ದಿಲ್ಲಿಯಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಮ್ರೇಡ್ ಆಯಿಷಿ ಘೋಷ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ನಾಡಿನ ಹಿರಿಯ ಸಾಹಿತಿಗಳಾದ ಆರ್.ಕೆ. ಹುಡುಗಿ, ಆರ್.ಜಿ. ಶೇಟಗಾರ, ಮೀನಾಕ್ಷಿ ಬಾಳಿ, ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಶಿವಪ್ಪ ಅಂಬ್ಲಿಕಲ್ ಹಾಗೂ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಸೇರಿದಂತೆ ರೈತ, ಕೃಷಿ ಕೂಲಿಕಾರ, ಕಾರ್ಮಿಕ, ದಲಿತ, ವಿದ್ಯಾರ್ಥಿ-ಯುವಜನ ಹಾಗೂ ಮಹಿಳಾ ಸಂಘಟನೆಗಳ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷೆ ಸುಜಾತ ವೈ., ಜಿಲ್ಲಾ ಕಾರ್ಯದರ್ಶಿ ಇಮಾಮ್ ಸಾಬ್, ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಲವಿತ್ರಾ ವಸ್ತ್ರದ, ಸ್ವಾಗತ ಸಮಿತಿಯ ಹನಮಂತರಾಯ ದೊಡ್ಡಮನಿ, ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಬೃಂದಾ, ಮುಖಂಡರಾದ ತಾಯಣ್ಣ ಟೋಕಾಪುರ, ಪೂಜಾ, ಅಕ್ಷರಾ, ಸವ್ಯಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






