ಕಲಬುರಗಿ | ಬಸ್ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ವತಿಯಿಂದ ಮನವಿ

ಕಲಬುರಗಿ: ಆಳಂದ ತಾಲೂಕಿನಲ್ಲಿ ಕಾಲೇಜು ಹಾಗೂ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಲಭ್ಯವಿಲ್ಲ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) ನೇತೃತ್ವದಲ್ಲಿ ಆಳಂದ ಬಸ್ ಡಿಪೋ ಮ್ಯಾನೇಜರ್‌ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷೆ ಮೇಘಾ ಚಿಚಕೋಟಿ, "ಆಳಂದ ತಾಲೂಕಿನ ಹಲವಾರು ಗ್ರಾಮಾಂತರ ಪ್ರದೇಶಗಳಿಂದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜುಗಳಿಗೆ ಬರುತ್ತಾರೆ. ಆದರೆ ಬೆಳಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ಬಸ್‌ಗಳು ಸಮಯಕ್ಕೆ ತಕ್ಕಂತೆ ಸರಿಯಾಗಿ ಓಡಿಸುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ತಪ್ಪಿಸುತ್ತಿದ್ದಾರೆ. ಇದು ಅವರ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ" ಎಂದು ತಿಳಿಸಿದರು.
“ಈ ಸಮಸ್ಯೆ ಬಗ್ಗೆ ಬಸ್ ಸಂಸ್ಥೆಯ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಸಮಸ್ಯೆ ಇನ್ನು ಮುಂದೆ ನಿರ್ಲಕ್ಷಿಸಿದರೆ, ಶೀಘ್ರದಲ್ಲೇ ಇತರ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಒಂದು ಬೃಹತ್ ಮಟ್ಟದ ಪ್ರತಿಭಟನೆಯನ್ನೇ ಆಯೋಜಿಸುವತ್ತ ನಾವು ಹೆಜ್ಜೆ ಹಾಕಬೇಕಾಗುತ್ತದೆ," ಎಂದು ಎಚ್ಚರಿಸಿದರು.
ಇದಕ್ಕೆ ಸ್ಪಂದಿಸಿದ ಬಸ್ ಡೆಪೋ ಅಧಿಕಾರಿಗಳು, "ನಾವು ಈ ಸಮಸ್ಯೆಯ ಕುರಿತು ಗಂಭೀರವಾಗಿ ಗಮನಹರಿಸಿದ್ದೇವೆ. ವಿದ್ಯಾರ್ಥಿಗಳ ಭದ್ರತೆ ಮತ್ತು ವಿದ್ಯಾಭ್ಯಾಸವನ್ನು ಒಳಗೊಳ್ಳುವಂತೆ ಶೀಘ್ರದಲ್ಲೇ ಬಸ್ ವೇಳಾಪಟ್ಟಿಯನ್ನು ಪರಿಷ್ಕರಿಸಲು ಮುಂದಾಗುತ್ತೇವೆ. ಕೆಲವೊಂದು ಮಾರ್ಗಗಳಲ್ಲಿ ವಾಹನದ ತಾಂತ್ರಿಕ ತೊಂದರೆ, ಚಾಲಕರ ಕೊರತೆ ಸೇರಿದಂತೆ ಹಲವಾರು ಅಡಚಣೆಗಳಿವೆ. ಆದರೂ ಇದರ ಪರಿಹಾರಕ್ಕಾಗಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ," ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ DYFI ಆಳಂದ ತಾಲೂಕಾ ಸಮಿತಿಯು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಿಮ್ರನ್, ಧನಶ್ರೀ, ಲವಿತ್ರ, ಮುತ್ತಮ್ಮ, ಜಗದೇವಿ, ಭಾಗ್ಯಶ್ರೀ, ಕಲ್ಲಮ್ಮ ಹಾಗೂ ಇತರೆ ವಿದ್ಯಾರ್ಥಿಗಳು ಇದ್ದರು.







