ಕಲಬುರಗಿ | ಯುಜಿಸಿ ಬಿಡುಗಡೆಗೊಳಿಸಿದ ಫಲಿತಾಂಶಗಳ ಆಧಾರಿತ ಪಠ್ಯಕ್ರಮಕ್ಕೆ ಎಸ್ಎಫ್ಐ ಖಂಡನೆ

ಕಲಬುರಗಿ: ಯುಜಿಸಿ ಬಿಡುಗಡೆ ಮಾಡಿದ ಪ್ರಾಚೀನ ಮತ್ತು ಅವೈಜ್ಞಾನಿಕ ಕಲಿಕಾ, ಫಲಿತಾಂಶಗಳ ಆಧಾರಿತ ಪಠ್ಯಕ್ರಮ ಚೌಕಟ್ಟು (LOCF) ಕರಡನ್ನು ಖಂಡಿಸಿ, ಭಾರತ ವಿದ್ಯಾರ್ಥಿ ಫೆಡರೇಷನ್ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
LOCF ಕರಡಿಗೆ ಸಾರ್ವಜನಿಕ ಪ್ರತಿಕ್ರಿಯೆ ಕೊಡುವುದಕ್ಕಾಗಿ ಕಡಿಮೆ ಸಮಯ ಕೊಡಲಾಗಿದೆ. ವಿ.ಡಿ. ಸಾವರ್ಕರ್ ಅವರ "ಭಾರತೀಯ ಸ್ವಾತಂತ್ರ್ಯ ಸಂಗ್ರಾಮ" ಎಂಬುದನ್ನು 'ಭಾರತೀಯ ಸ್ವಾತಂತ್ರ್ಯ ಹೋರಾಟ'ದ ಕೋರ್ಸ್‌ನ ಓದುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಶಿಕ್ಷಣದಲ್ಲಿ ಆರೆಸ್ಸೆಸ್ ಕಾರ್ಯಸೂಚಿಯನ್ನು ಸೇರಿಸುವ ಪ್ರಯತ್ನವಾಗಿದೆ. ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸದಿಂದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸ ಇದರ ಉದ್ದೇಶ ಹೊಂದಲಾಗಿದೆ ಎಂದು ಎಸ್ಎಫ್ಐ ಸಂಘಟನೆಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಜಿಸಿ ಮಂಡಿಸಿದ ಈ ಅವೈಜ್ಞಾನಿಕ ಮನೋಭಾವದ ಪ್ರಚಾರವನ್ನು ವಿರೋಧಿಸಲು ಎಸ್‌ಎಫ್‌ಐ ವಿದ್ಯಾರ್ಥಿಗಳಿಗೆ ಕರೆ ನೀಡಿದೆ. ಯುವ ಮನಸ್ಸುಗಳನ್ನು ಕೋಮುವಾದಿಗೊಳಿಸುವ ಪ್ರಯತ್ನವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಾರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಸಿಎಫ್ಐ ಜಿಲ್ಲಾ ಕಾರ್ಯದರ್ಶಿ ಸುಜಾತಾ ವೈ., ಜಿಲ್ಲಾ ಉಪಾಧ್ಯಕ್ಷ ಪ್ರೇಮ್, ಹುಲಗಮ್ಮ, ಮಾಲಾಶ್ರೀ, ಕಿರಣ್ ನಾಟಿಕಾರ್, ಅವಿನಾಶ್, ದೇವಾನಂದ, ರಾಕೇಶ್, ಶರಣು, ಚೇತನ್, ವಿಜಯಕುಮಾರ್, ಸುಧೀರ ಸೇರಿದಂತೆ ಮತ್ತಿತರರು ಇದ್ದರು.







