ಕಲಬುರಗಿ | ಅಮಿತ್ ಶಾ ಹೇಳಿಕೆ ಖಂಡಿಸಿ ಎಸ್ಎಫ್ಐ ಪ್ರತಿಭಟನೆ

ಕಲಬುರಗಿ : 'ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ' ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದನ್ನು ಖಂಡಿಸಿ, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯರು ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಹೇಳಿಕೆಯು ಆರೆಸ್ಸೆಸ್-ಬಿಜೆಪಿಯ ಜಾತಿವಾದಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ, ಇದು ಅಂಬೇಡ್ಕರ್ ಅವರನ್ನು ಅವಕಾಶವಾದಿಯಾಗಿ ಸ್ವಾಧೀನಪಡಿಸಿಕೊಳ್ಳುವಾಗಲೂ ಅವರನ್ನು ದುರ್ಬಲಗೊಳಿಸುತ್ತದೆ. ಬಿಜೆಪಿ ಸರಕಾರದಲ್ಲಿ ನಿರಂತರವಾಗಿ ಹಿಂದುಳಿದ ಸಮುದಾಯಗಳ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಪ್ರತಿಭಟನಾನಿರತರು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
ಶಿಕ್ಷಣ ಕ್ಷೇತ್ರದಲ್ಲೂ ಮೋದಿ ಸರಕಾರ ಬಹಿರಂಗವಾಗಿ ದಲಿತ ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ. SC/ST ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ನಿಗದಿಪಡಿಸಿದ ಮೊತ್ತವು ಕ್ಯಾಬಿನೆಟ್ ನಿಗದಿಪಡಿಸಿದ ಅರ್ಧಕ್ಕಿಂತ ಕಡಿಮೆ ಮೊತ್ತವಾಗಿದೆ. ಇನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಶೇ.0.1 ರಷ್ಟು ಹಣವನ್ನು ಮಾತ್ರ ವಿತರಿಸಲಾಗಿದೆ.
ಇದಲ್ಲದೆ ನಿರಂತರ ಶುಲ್ಕ ಹೆಚ್ಚಳವು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಇನ್ನಷ್ಟು ಪ್ರವೇಶಿಸಲಾಗುವುದಿಲ್ಲ. ಇಂಥಹ ನಡೆಯನ್ನು ಎಸ್ಎಫ್ಐ ಖಂಡಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಬೇಕು, ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಜಾತಾ, ಉಪಾಧ್ಯಕ್ಷರಾದ ಪ್ರೇಮ್, ಭರತ್, ವೆಂಕಟೇಶ್ ಮಲ್ಲೇಶಿ, ರೋಹನ್, ಸಾಗರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.







