ಕಲಬುರಗಿ| ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ SFI ವತಿಯಿಂದ ಪ್ರತಿಭಟನೆ

ಕಲಬುರಗಿ: ನೀಟ್ ಯುಜಿ-2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ, ಸಮಗ್ರ ತನಿಖೆ ನಡೆಸಬೇಕು, ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(SFI) ಕಲಬುರಗಿ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 3ರಂದು ನಡೆದ NEET UG-2026 ಪರೀಕ್ಷೆಯಲ್ಲಿ ದೇಶದಾದ್ಯಂತ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ ಪ್ರಶ್ನೆಪತ್ರಿಕೆ ರಾಜಸ್ಥಾನದಲ್ಲಿ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ NTA ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ಘೋಷಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಅನಿಶ್ಚಿತತೆ ಸೃಷ್ಟಿಸಿದೆ ಎಂದು ಆರೋಪಿಸಿದರು.
ಆರಂಭದಿಂದಲೇ ಪರೀಕ್ಷಾ ನಿರ್ವಹಣೆಯಲ್ಲಿ ವೈಫಲ್ಯ ಹಾಗೂ ಅಕ್ರಮಗಳಿಗೆ ಕುಖ್ಯಾತವಾಗಿರುವ NTA ಸಂಸ್ಥೆ ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ಸಾಬೀತುಪಡಿಸಿದೆ. ಈ ಹಿಂದೆ ನಡೆದ ಹಲವಾರು ಪರೀಕ್ಷೆಗಳಲ್ಲಿಯೂ ಅಕ್ರಮಗಳು ಬೆಳಕಿಗೆ ಬಂದಿದ್ದು, ಇಂತಹ ಅಸಮರ್ಥ ಸಂಸ್ಥೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ವರದಿಗಳ ಪ್ರಕಾರ, ಒಟ್ಟು 720 ಅಂಕಗಳ ಪರೀಕ್ಷೆಯಲ್ಲಿ ಸುಮಾರು 600 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸೋರಿಕೆಯಾಗಿವೆ ಎನ್ನಲಾಗುತ್ತಿದೆ. 180 ಪ್ರಶ್ನೆಗಳ ಪೈಕಿ ಅನೇಕ ಪ್ರಶ್ನೆಗಳು ಮುಂಚಿತವಾಗಿ ಹರಿದಾಡಿದ್ದು, ವಿಶೇಷವಾಗಿ ರಸಾಯನಶಾಸ್ತ್ರ ವಿಭಾಗದ ಹಲವು ಪ್ರಶ್ನೆಗಳು ಅಕ್ಷರಶಃ ಸೋರಿಕೆಯಾಗಿರುವುದು ಗಂಭೀರ ವಿಚಾರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪರೀಕ್ಷಾ ವ್ಯವಸ್ಥೆಯನ್ನು ಕೇಂದ್ರೀಕರಿಸುವ ಕೇಂದ್ರ ಸರ್ಕಾರದ ಕ್ರಮಗಳಿಂದಲೇ ಇಂತಹ ಅಕ್ರಮಗಳಿಗೆ ಅವಕಾಶ ಸಿಕ್ಕಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕುಸಿದಿದ್ದು, ದೇಶದ ವಿವಿಧ ಭಾಗಗಳಲ್ಲಿ ಪರೀಕ್ಷಾ ಮಾಫಿಯಾಗಳು ಬೆಳೆದುಬಂದಿವೆ. ಇದರಿಂದ ಮಧ್ಯಮ ವರ್ಗ ಮತ್ತು ಬಡ ವಿದ್ಯಾರ್ಥಿಗಳು ಶೋಷಣೆ ಹಾಗೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಎಸ್‌ಎಫ್‌ಐ ಮುಖಂಡರು ಅಭಿಪ್ರಾಯಪಟ್ಟರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪರೀಕ್ಷೆ ರದ್ದತಿಯಿಂದ ವಿದ್ಯಾರ್ಥಿಗಳಿಗೆ ಉಂಟಾದ ಮಾನಸಿಕ ಹಾಗೂ ಆರ್ಥಿಕ ಹಾನಿಗೆ NTA ಪರಿಹಾರ ನೀಡಬೇಕು. ಜೊತೆಗೆ ಕೇಂದ್ರ ಸರ್ಕಾರವು ತನ್ನ ಅವೈಜ್ಞಾನಿಕ ಕೇಂದ್ರೀಕರಣ ನೀತಿಯನ್ನು ಕೈಬಿಟ್ಟು NTA ಯನ್ನು ರದ್ದುಪಡಿಸಬೇಕು ಎಂದು ಎಸ್‌ಎಫ್‌ಐ ಕಲಬುರಗಿ ಜಿಲ್ಲಾ ಸಮಿತಿ ಆಗ್ರಹಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸರ್ವೇಶ್ ಮಾವಿನಕರ್, ಜಿಲ್ಲಾ ಕಾರ್ಯದರ್ಶಿ ಸುಜಾತ ವೈ., ಜಿಲ್ಲಾ ಮುಖಂಡರಾದ ರೋಹಿತ್ ಧನ್ನಿ, ಇಮಾಮ್ ಸಾಬ್, ತಾಯಣ್ಣ, ಪ್ರದೀಪ್ ದೇವರಾಜ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






