ಕಲಬುರಗಿ | ಕೋಡ್ಲಾದಲ್ಲಿ ಶರಣ ಸಂಗಮ : ಬಸವ ಕಾಯಕ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ: ಕಕ ಭಾಗದಲ್ಲಿಯೇ ಅನೇಕ ಪ್ರತಿಭಾವಂತ ಸಾಧಕರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಇದರಿಂದ ಸಾಧಕರಿಗೆ ಸೇವೆ ಮಾಡಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ. ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ತಾಪಂ ಮಾಜಿ ಸದಸ್ಯ ಮತ್ತು ಶಿಕ್ಷಣ ಪ್ರೇಮಿ ಪರ್ವತರೆಡ್ಡಿ ಪಾಟೀಲ ನಾಮವಾರ ಅಭಿಮತ ವ್ಯಕ್ತಪಡಿಸಿದರು.
ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ ಪರೋಪಕಾರಿ, ಸಮಾಜ ಸೇವಕ ಲಿಂ.ಬಸವಂತರಾವ ಸಿ.ಪಾಟೀಲ ಅವರ ತೃತೀಯ ಲಿಂಗೈಕ್ಯ ಸ್ಮರಣೋತ್ಸವದ ಪ್ರಯುಕ್ತ ಕಲಬುರಗಿಯ ʼಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂನ್ಯಾಯ ಮಂಡಳಿಯ ಮಾಜಿ ಸದಸ್ಯ ರವಿ ಸಾಹು ತಂಬಾಕೆ ಮಾತನಾಡಿ, ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಹೆತ್ತವರನ್ನು ಗೌರವಿಸುವ ಕೆಲಸ ಮಾಡುತ್ತಿರುವ ಸಮಾಜ ಸೇವಕ ಎಚ್.ಬಿ.ಪಾಟೀಲ್ ರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನಾರ ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ಪ್ರಶಸ್ತಿಗಳು ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುತ್ತವೆ, ತಾಲೂಕಿನಲ್ಲಿ ಹಲವಾರು ಜನರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧಕರಿದ್ದಾರೆ ಎಂದು ನುಡಿದರು.
“ಜಾಗತಿಕ ತಲ್ಲಣಗಳಿಗೆ ಶರಣ ತತ್ವ ಪರಿಹಾರ” ಎಂಬ ವಿಷಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ಜಗತ್ತಿನ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಶರಣ ತತ್ವದಲ್ಲಿ ಪರಿಹಾರವಿದೆ ಎಂದು ಶರಣರ ಅನೇಕ ವಚನಗಳೊಂದಿಗೆ ಮನೋಜ್ಞವಾಗಿ ವಿವರಿಸಿದರು.
ಕೋಡ್ಲಾ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾರುತಿ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ಸುರೇಶರೆಡ್ಡಿ ಪುರ್ಮಾ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ವಿ.ಆರಕೋಟಿ, ಗ್ರಾಪಂ ಸದಸ್ಯರುಗಳಾದ ಶಿವಲಿಂಗಯ್ಯಸ್ವಾಮಿ ಗಚ್ಚಿನಮಠ, ಸಂಜೀವರೆಡ್ಡಿ, ಅಮೀನರೆಡ್ಡಿ ಮದ್ನಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಮುಖರಾದ ಭೀಮರಾಯ ಹಣಮನಳ್ಳಿ, ಶರಣಪ್ಪರೆಡ್ಡಿ, ಶರಣರೆಡ್ಡಿ ಆರಕಟ್ಟಿ, ಗುರುನಾಥ ವಿಶ್ವಕರ್ಮ, ರಾಜು ಮಾಳಮಪನೋರ, ಮಲ್ಲು ಕಾಕಲವಾರ, ಮೊಗಲಮ್ಮ, ಶೋಭಾ, ಸುಮನ್, ಅರುಣಾ, ದೀಪಿಕಾ, ಸುಧಾರಾಣಿ, ಪೂಜಾ, ಅನ್ನಪೂರ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ವೈಷ್ಣವಿ, ಅನುಷಾ ಸಂಗಿಡಗರು ಪ್ರಾರ್ಥಿಸಿದರು. ಜ್ಯೋತಿ ಲಿಂಗಂಪಲ್ಲಿ ಗಾಯನ ನಡೆಸಿಕೊಟ್ಟರು. ನ್ಯಾಯವಾದಿ ಸಂಜೀವರೆಡ್ಡಿ ಸ್ವಾಗತಿಸಿದರು. ಶಿಕ್ಷಕಿ ಶರಣಕಲಾ ನಿರೂಪಿಸಿದರು. ಸಿಆರ್ಪಿ ರಾಧಾಕೃಷ್ಣ ಹೆರೂರ್ ವಂದಿಸಿದರು.
ಬಸವ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತರು :
ವಿವಿಧ ಕ್ಷೇತ್ರದ ಸಾಧಕರಾದ ಸಾಯಿರಾಮರೆಡ್ಡಿ ವಿ.ಕೋನಾಪುರ(ಕೃಷಿ), ಶಂಭುರೆಡ್ಡಿ ಮದ್ನಿ(ಶಿಕ್ಷಣ), ಸವಿತಾಎಸ್.ಕುಂಬಾರ(ಚಿತ್ರಕಲೆ), ನಾಗಯ್ಯ ಮಠ(ಸಮಾಜ ಸೇವೆ) ಮತ್ತು ಡಾ.ವೈ.ಬಿ.ರಮೇಶ್(ಆರ್ಯುರ್ವೇದ ವೈದ್ಯಕೀಯ) ಅವರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.







