ಕಲಬುರಗಿ | ಶರಣಬಸವ ವಿವಿಗೆ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ: ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅತ್ಯುತ್ತಮ ಸಂಸ್ಥೆಗಳಿಗೆ ನೀಡುವ 2025ರ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ ಶರಣಬಸವ ವಿಶ್ವವಿದ್ಯಾಲಯಕ್ಕೆ ಲಭಿಸಿದೆ.
ಶನಿವಾರ ಚಂಡೀಗಢದ CSIR-CSIO ಕ್ಯಾಂಪಸ್ ನಲ್ಲಿ ನಡೆದ ಐಇಟಿಇ 68ನೇ ವಾರ್ಷಿಕ ಸಮಾವೇಶದಲ್ಲಿ, ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (UPSC) ಅಧ್ಯಕ್ಷ ಡಾ. ಅಜಯ್ ಕುಮಾರ್ ಅವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಶರಣಬಸವ ವಿಶ್ವವಿದ್ಯಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ನವೀನ ಸಂಶೋಧನೆ ಮತ್ತು ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸಿದ ಕಾರಣ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ಪದಕ, ಫಲಕ ಮತ್ತು ನಗದು ಬಹುಮಾನವನ್ನು ಒಳಗೊಂಡಿದೆ.
2017ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯವು, ಪದವಿಪೂರ್ವ ಹಂತದಿಂದಲೇ ಸಂಶೋಧನಾ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಮುನ್ನಡೆದುಕೊಂಡು, ಪ್ರತಿಯೊಂದು ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಕನಿಷ್ಠ ಒಂದು ಸಂಶೋಧನಾ ಯೋಜನೆಯನ್ನು ಪೂರ್ಣಗೊಳಿಸುವಂತೆ ಕಡ್ಡಾಯಗೊಳಿಸಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆ (2002) ಈ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು 2017ರಲ್ಲಿ ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಂಡಿತು.
ವಿಶ್ವವಿದ್ಯಾಲಯವು ಈ ಸಾಧನೆಯ ಮೂಲಕ ಐಇಟಿಇಯಿಂದ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ: ಮೊದಲನೆಯದು ಮಹಿಳಾ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ, ಮತ್ತು ಈಗ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ. ಪ್ರಶಸ್ತಿಗಳನ್ನು ಶರಣಬಸವ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಅರ್ಪಿಸಲಾಗಿದೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಮತ್ತು ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ದೊಡ್ಡಪ್ಪ ಅಪ್ಪಾಜಿಯವರು ಈ ರಾಷ್ಟ್ರೀಯ ಮನ್ನಣೆಗಾಗಿ ಉಪಕುಲಪತಿ ಮತ್ತು ಇತರ ಪದಾಧಿಕಾರಿಗಳು ಮತ್ತು ಬೋಧನಾ ಸಿಬ್ಬಂದಿಯನ್ನು ಅಭಿನಂದಿಸಿ ಆಶೀರ್ವಾದಿಸಿದ್ದಾರೆ.
ವಿವಿಯ ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ, ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಸೇರಿದಂತೆ ಇತರರು ಈ ಸಾಧನೆಗಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಬೋಧನಾ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.







