ಕಲಬುರಗಿ | ಶರಣರು ವೈದಿಕಶಾಹಿ ತೆರಿಗೆ ಪದ್ಧತಿಯ ವಿರುದ್ಧ ಹೋರಾಡಿದವರು : ಡಾ. ಶಿವಗಂಗಾ ರುಮ್ಮಾ

ಕಲಬುರಗಿ : ಕಳಚೂರಿಗಳು ಕರ್ನಾಟಕದ ಚರಿತ್ರೆಯಲ್ಲಿ ಅಲ್ಪಾವಧಿಗೆ ಆಡಳಿತ ನಡೆಸಿದರೂ, ಬಸವಣ್ಣ ಪ್ರಣೀತ ವಚನ ಚಳುವಳಿಯೊಂದಿಗೆ ವೈದಿಕಶಾಹಿಯ ಮನುಷ್ಯ ವಿರೋಧಿ ನೀತಿಗಳನ್ನು ಎದುರಿಸಿದರೆಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶಿವಗಂಗಾ ರುಮ್ಮಾ ಅವರು ಅಭಿಪ್ರಾಯಪಟ್ಟರು.
ಕಾಳಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಲಬುರಗಿಯ ವಿಭಾಗಿಯ ಪತ್ರಾಗಾರ ಇಲಾಖೆ, ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ಇವರ ಜಂಟಿ ಸಹಭಾಗಿತ್ವದಲ್ಲಿ 'ಕಳಚೂರಿ ಮನೆತನ : ಚರಿತ್ರೆ ಮತ್ತು ಸಂಸ್ಕೃತಿ' ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಎರಡನೆ ದಿನದ ಕಾರ್ಯಕ್ರಮದಲ್ಲಿ ಕಳಚೂರಿ ಕಾಲದ ತೆರಿಗೆ ಪದ್ಧತಿಯ ಕುರಿತು ಅವರು ಉಪನ್ಯಾಸ ನೀಡಿದರು.
ಎರಡನೇ ದಿನದ ಮೊದಲ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ವಿಕ್ರಮ ವಿಸಾಜಿ, ಕನ್ನಡ ಕಾವ್ಯಗಳಲ್ಲಿ ಅಭಿವ್ಯಕ್ತಗೊಂಡಿರುವ ಚರಿತ್ರೆಯ ಎಳೆಗಳನ್ನು ಬಹಳ ಎಚ್ಚರಿಕೆಯಿಂದ ಚರಿತ್ರಾಕಾರರು ಬಳಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಚರಿತ್ರೆ ಪುರಾಣವಾಗುವ ಅಪಾಯವನ್ನು ಎದುರಿಸುತ್ತದೆ ಎಂದು ಹೇಳಿದರು. ಶರಣ ಚಳುವಳಿ ನಡೆದ ನೂರಿನ್ನೂರು ವರ್ಷಗಳ ಅಂತರದಲ್ಲಿ ಹುಟ್ಟಿಕೊಂಡ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿ ಆ ಕಾಲದ ಅನೇಕ ಚಾರಿತ್ರಿಕ ಎಳೆಗಳಿವೆ. ಅವುಗಳನ್ನು ವರ್ತಮಾನದ ಸಂಶೋಧಕರು, ಚರಿತ್ರೆ ಬರವಣಿಗೆಯಲ್ಲಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಕಳಚೂರಿ ಕಾಲದ ಅಗ್ರಹಾರ ಮತ್ತು ಘಟಿಕಾಸ್ಥಾನಗಳು ಎಂಬ ವಿಷಯದ ಬಗ್ಗೆ ಜಮಖಂಡಿಯ ಡಾ. ಮಂಜುನಾಥ ಎಸ್ ಪಾಟೀಲ ಹಾಗೂ ಕಳಚೂರಿ ಬಿಜ್ಜಳ ಒಂದು ಅವಲೋಕನ ಎಂಬ ವಿಷಯದ ಮೇಲೆ ಡಾ. ವೀರಶೆಟ್ಟಿ ಯವರು ಉಪನ್ಯಾಸಗಳನ್ನು ನೀಡಿದರು.
ಶರಣಗೌಡ ಪಾಟೀಲ ಪಾಳಾ, ಕಾಲೇಜಿನ ಪ್ರಾಂಶುಪಾಲರಾದ ಪಂಡಿತ ಸಿ. ಬಿಳಾಮಗೆ, ಸಮ್ಮೇಳನದ ಸಂಯೋಜಕರಾದ ಡಾ. ಗುರುಪ್ರಕಾಶ ಹೂಗಾರ, ಡಾ. ಶಿವಶರಣಪ್ಪ ಮೋತಕಪಲ್ಲಿ ಮುಂತಾದವರು ಉಪಸ್ಥಿತರಿದ್ದರು.
ಡಾ. ಸವಿತಾ ತಿವಾರಿ, ಡಾ. ಜಗದೇವಪ್ಪ ಧರಣಿ, ಡಾ. ಶರಣಪ್ಪ ಮಾಳಗಿ, ಡಾ. ಶಿವಯ್ಮ ಹಿರೇಮಠ, ಡಾ. ಮಹಮ್ಮದ್ ಯೂನಸ್ ಇವರುಗಳು ಆಯಾ ಗೋಷ್ಠಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಗಿರೀಶ್, ಡಾ. ಸಂಜೀವಕುಮಾರ್ ತಾಂದಳೆ, ಗುಲಾಮ್ ಮಹೆಬೂಬ್, ಖಾಜಾವಲಿ ಈಚನಾಳ, ಡಾ. ಪಂಡಿತ್ ಬಿ.ಕೆ, ಸಿದ್ರಾಮಪ್ಪ ಬಣಗಾರ, ಡಾ. ಮಲ್ಲಿಕಾರ್ಜುನಶೆಟ್ಟಿ, ಡಾ. ರವಿಚಂದ್ರ, ಡಾ.ಬಸವರಾಜ ಭಾಗಾ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.







