ಕಲಬುರಗಿ| ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತ ಕಾಪಾಡುವಂತೆ ಶಶೀಲ್ ನಮೋಶಿ ಒತ್ತಾಯ

ಕಲಬುರಗಿ: ರಾಜ್ಯದ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಹಿತ ಕಾಪಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೇಳಿಕೆ ನೀಡಿರುವ ಅವರು, ಉಪನ್ಯಾಸಕರ ಕಾರ್ಯಭಾರದ ಕುರಿತು ಆ.28 ರಂದು ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರಿಗೆ ಜ್ಞಾಪನಾ ಪತ್ರವನ್ನು ಬರೆದು ಆ.30 ರ ಒಳಗಾಗಿ ಕಾರ್ಯಭಾರವನ್ನು ಹೊಂದಿರದ ಅಥವಾ ಕಡಿಮೆ ಕಾರ್ಯಭಾರ ಹೊಂದಿರುವ ಉಪನ್ಯಾಸಕರ ಮಾಹಿತಿಯನ್ನು ನೀಡಿ, ಅಂತಹ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸಲು ಕ್ರಮವಹಿಸಬೇಕಾಗಿದೆ ಎಂದು ತಿಳಿಸಿರುತ್ತಾರೆ. ಇದು ರಾಜ್ಯದ ಖಾಸಗಿ ಅನುದಾನಿತ ಉಪನ್ಯಾಸಕರಿಗೆ ಆತಂಕ ಎದುರಾಗುವಂತೆ ಮಾಡಿದೆ. ಕೂಡಲೇ ಅವರ ಹಿತ ಕಾಪಾಡಬೇಕೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರಿಗೆ ಪತ್ರ ಬರೆಯುವ ಮೂಲಕ ನಮೋಶಿ ಆಗ್ರಹಿಸಿದ್ದಾರೆ.
ಇಂತಹ ಆದೇಶಗಳು ಮುಂಬರುವ ಪಿಯುಸಿ ಫಲಿತಾಂಶಗಳ ಮೇಲೆ ಭಾರೀ ಪರಿಣಾಮ ಬೀರಬಹುದು. ಹಾಗಾಗಿ ಅನುದಾನಿತ ನೌಕರರಿಗೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಯಾವುದೇ ಕ್ರಮ ವಹಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.





